ಶಾಶ್ವತ ತಡೆಬೇಲಿ ನಿರ್ಮಾಣಕ್ಕೆ ವಿರೋಧ

pdb (2)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಿಂದ ಹೆಜಮಾಡಿ ಗ್ರಾಮವನ್ನು ಸಂಪರ್ಕಿಸುವ ಲೋಕೋಪಯೋಗಿ ಇಲಾಖೆ ಒಳ ರಸ್ತೆ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ತಡೆಬೇಲಿ ತೆರವು ಮಾಡಿ ಶಾಶ್ವತ ತಡೆಬೇಲಿ ನಿರ್ಮಾಣಕ್ಕೆ ಟೋಲ್ ಪ್ಲಾಜಾ ನಿರ್ವಹಣಾ ಕಂಪೆನಿ ಮುಂದಾಗಿತ್ತು. ಸ್ಥಳೀಯಾಡಳಿತ ಹಾಗೂ ಸಾರ್ವಜನಿಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ. ಟೋಲ್ ಸೋರಿಕೆ ತಡೆಯುವ ಸಲುವಾಗಿ ಲೋಕೋಪಯೋಗಿ ಇಲಾಖೆ ರಸ್ತೆಗೆ ಹಿಂದಿನ ನವಯುಗ ಕಂಪೆನಿ ಟೋಲ್‌ಗೇಟ್ ನಿರ್ಮಾಣ ಮಾಡಿ ಸುಂಕ ವಸೂಲಾತಿ ನಡೆಸುತ್ತಿತ್ತು. ಹೆಜಮಾಡಿ ಗ್ರಾಮದವರಿಗೆ ಟೋಲ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿತ್ತು. ಈ ಟೋಲ್ ಫ್ಲಾಜಾದ ನಿರ್ವಹಣೆಯನ್ನು ಕೆಕೆಆರ್ ಕಂಪೆನಿ ವಹಿಸಿಕೊಂಡ ಬಳಿಕ ಸ್ಥಳೀಯರನ್ನು ಕಡೆಗಣಿಸಿ ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಕೆಕೆಆರ್ ಕಂಪನಿಯ ಕ್ರಮವನ್ನು ವಿರೋಧಿಸಿ ಹೆಜಮಾಡಿ ಗ್ರಾಪಂ ಆಡಳಿತ ಜೂನ್ 30ರಂದು ಪ್ರತಿಭಟನೆ ನಡೆಸಿ ಟೋಲ್ ಪ್ಲಾಜಾ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ಸೆಡ್ಡು ಹೊಡೆದಿತ್ತು.

ಶಾಶ್ವತ ತಡೆಗೋಡೆ ನಿರ್ಮಾಣ

ಕೆಕೆಆರ್ ಕಂಪೆನಿಯ ಸಿಬ್ಬಂದಿ ಟೋಲ್ ರಸ್ತೆ ಬದಿ ತಾತ್ಕಾಲಿಕವಾಗಿ ಅಳವಡಿಸಿದ್ದ ತಡೆಯನ್ನು ಗುರುವಾರ ತೆರವುಗೊಳಿಸಿ ಶಾಶ್ವತ ತಡೆಬೇಲಿ ನಿರ್ಮಿಸಲು ಮುಂದಾಯಿತು. ವಿಷಯ ತಿಳಿದ ಗ್ರಾಮಾಡಳಿತ ಸಾರ್ವಜನಿಕರೊಂದಿಗೆ ಸೇರಿ ಕಾಮಗಾರಿ ನಡೆಸಲು ಬಂದ ಕಂಪೆನಿ ಇಂಜಿನಿಯರ್ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿತು. ತಾತ್ಕಾಲಿಕ ತಡೆಗೋಡೆಯಿಂದ ಘನವಾಹನ ಸಹಿತ ಅಪಘಾತಗಳುಂಟಾದಾಗ ವಾಹನಗಳ ಸಂಚಾರಕ್ಕೆ ಅನುಕೂಲಕರವಾಗಿತ್ತು. ಶಾಶ್ವತ ತಡೆಬೇಲಿ ನಿರ್ಮಾಣವಾದರೆ ಸಂಚಾರಕ್ಕೆ ಅಡ್ಡಿಯಾಗಲಿದೆ. ಯಾವುದೇ ಕಾರಣಕ್ಕೂ ತಡೆಬೇಲಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ತಡೆಯೊಡ್ಡಿದರು. ಮೇಲಧಿಕಾರಿಗಳ ಆದೇಶದಂತೆ ಕಾಮಗಾರಿ ನಡೆಸುತ್ತಿರುವುದಾಗಿ ಸಿಬ್ಬಂದಿ ತಿಳಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಟೋಲ್ ಮ್ಯಾನೇಜರ್ ತಿಮ್ಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಟೋಲ್ ಪ್ಲಾಜಾ ನಿರ್ವಹಣೆ ಕಂಪನಿ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವಿನ ಗಲಾಟೆ ವಿಷಯ ತಿಳಿದು ಮಧ್ಯಪ್ರವೇಶಿಸಿದ ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು, ಯಾವುದೇ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಎರಡೂ ಕಡೆಯವರನ್ನು ಅಲ್ಲಿಂದ ವಾಪಸ್ ಕಳುಹಿಸಿದರು. ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಎ.ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯ ಶರಣ್‌ಕುಮಾರ್ ಮಟ್ಟು, ಪ್ರಸಾದ್ ಕಬೀರ್, ಜನಾರ್ದನ ಕೋಟ್ಯಾನ್, ಪವಿತ್ರಾ ಗಿರೀಶ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುಧಾಕರ ಕರ್ಕೇರ, ಎಚ್.ರವಿ, ಲೋಕೇಶ್ ಅಮೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net