ಎರಡನೇ ಬೆಳೆಗೆ ಸಜ್ಜಾದ ರೈತರು

gan (8)
Published on

ರಾಘವೇಂದ್ರ ಪೈ ಕುಂದಾಪುರ ಮೊದಲ ಬಾರಿ ಹಾಕಿದ ಬೀಜ ನೆರೆ ನೀರಿನಲ್ಲಿ ಕೊಳೆತು ಹೋದ ಪರಿಣಾಮ ಬೈಂದೂರು ತಾಲೂಕಿನ ಕೆಲ ನೆರೆಪೀಡಿತ ಪ್ರದೇಶದ ರೈತರು ಎರಡನೇ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಈ ಬಾರಿಯ ಮುಂಗಾರು ಕೃಷಿಗೆ ಆಶಾದಾಯಕವಾಗಿರಲಿದೆ ಎಂದು ನಂಬಿಕೊಂಡಿದ್ದ ರೈತರಿಗೆ ಆರಂಭದಲ್ಲೇ ಮುಂಗಾರು ಮಳೆ ಆತಂಕ ಹುಟ್ಟಿಸಿತ್ತು. ಬೀಜ ಬಿತ್ತನೆ ಸಂದರ್ಭ ಸುರಿದ ವ್ಯಾಪಕ ಮಳೆಯ ಕಾರಣ ನೆರೆ ನೀರಿನಲ್ಲಿ ರೈತರು ಬಿತ್ತಿದ ಬೀಜ ಕೊಳೆತು ಹೋಗಿತ್ತು. ಇದೀಗ ಎರಡನೇ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬುಧವಾರದಿಂದ ಸುರಿಯುತ್ತಿರುವ ಮಳೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನೆರೆ ಆತಂಕ: ಮೇ ಕೊನೆ ವಾರದಲ್ಲಿ ಸುರಿದ ಪೂರ್ವ ಮುಂಗಾರು ಮಳೆ ಹಾಗೂ ಆ ಬಳಿಕ ನಿರಂತರವಾಗಿ ಸುರಿದ ಮಳೆಯಿಂದ ಬೈಂದೂರು ತಾಲೂಕಿನ ನಾಡ, ಹಡವು, ನಾವುಂದ, ಸಾಲ್ಬುಡ, ಪಡುಕೋಣೆ, ಬಡಾಕೆರೆ ಮೊದಲಾದ ಕಡೆಗಳಲ್ಲಿ ನೆರೆ ಕಾಣಿಸಿಕೊಂಡಿತು. ಹೊಲ ಗದ್ದೆಗಳು ನೆರೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡ ಪರಿಣಾಮ ರೈತರು ಬಿತ್ತಿದ ಬೀಜಗಳು ಕೊಳೆತು ಬೆಳೆ ಹಾನಿಯಾಗಿತ್ತು. ಹೀಗಾಗಿ ಈ ಭಾಗದ ರೈತರು ಎರಡನೇ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕಳೆದ 15 ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು ಎರಡನೇ ಬಾರಿ ಬೀಜ ಬಿತ್ತಿ ನೇಜಿ ಸಿದ್ಧಪಡಿಸಿಕೊಂಡು ನಾಟಿ ಕಾರ್ಯ ಆರಂಭಿಸಿದ್ದಾರೆ.

ಚಾಪೆ ನೇಜಿ ನಿರುಪಯುಕ್ತ

ನೆರೆಪೀಡಿತ ಈ ಭಾಗಗಳಲ್ಲಿ ಚಾಪೆ ನೇಜಿ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಚಾಪೆ ನೇಜಿಯ ಗಿಡಗಳು ಬಹಳ ಸಣ್ಣದಾಗಿರುವುದರಿಂದ ನೆರೆ ಬಂದರೆ ಗಿಡಗಳು ಕೊಳೆತು ಹೋಗುತ್ತದೆ. ಹೀಗಾಗಿ ಈ ಭಾಗದಲ್ಲಿ ರೈತರು ಗದ್ದೆಯಲ್ಲಿ ಬೀಜ ಹಾಕಿ ನೇಜಿ ತಯಾರಿಸಿ ನಾಟಿ ಮಾಡುತ್ತಿದ್ದಾರೆ.

ಇಷ್ಟರೊಳಗೆ ಮುಗಿಯುತ್ತಿತ್ತು ನಾಟಿ

ಪ್ರತಿ ವರ್ಷ ಮಳೆಗಾಲದಲ್ಲಿ ಸಂಕ್ರಾತಿಗೆ ಮೊದಲು ಬೀಜ ಬಿತ್ತನೆ ಆರಂಭಿಸಿ ಇಷ್ಟರೊಳಗೆ ನಾಟಿ ಕಾರ್ಯ ಮುಗಿಸುತ್ತಿದ್ದ ರೈತರು ಈ ಬಾರಿ ಈಗಷ್ಟೇ ನಾಟಿ ಕಾರ್ಯ ಆರಂಭಿಸಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯಿಂದ ಹಲವೆಡೆ ನಾಟಿ ಕಾರ್ಯ ವಿಳಂಬವಾಗುತ್ತಿದ್ದರೆ, ವ್ಯಾಪಕ ಮಳೆ ಹಾಗೂ ನೆರೆಯಿಂದ ರೈತರು ನಾಟಿ ಮಾಡಲು ಮನಸ್ಸು ಮಾಡಿಲ್ಲ. ನಾಟಿ ಕಾರ್ಯ ಮುಗಿಯಬೇಕಿದ್ದ ಈ ಸಮಯದಲ್ಲಿ ಭತ್ತ ನಾಟಿ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಇನ್ನೂ ನಾಟಿ ಕಾರ್ಯ ಆರಂಭವಾಗಿಲ್ಲ ಎನ್ನುತ್ತಾರೆ ಸ್ಥಳೀಯ ರೈತರು.

ಹಡಿಲು ಬಿದ್ದ ಗದ್ದೆಗಳು

ಬೇಸಾಯ ಮಾಡಲಾಗದೆ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿದ್ದಿದೆ. ಕೂಲಿ ಕಾರ್ಮಿಕರ ಸಮಸ್ಯೆ, ಹವಾಮಾನ ವೈಪರಿತ್ಯ, ಖರ್ಚು-ವೆಚ್ಚ ಸರಿತೂಗಿಸಲು ಸಾಧ್ಯವಾಗದ ಕಾರಣಗಳಿಂದ ಅನೇಕ ರೈತರು ಕೃಷಿ ಭೂಮಿಗಳನ್ನು ಮಾರಾಟ ಮಾಡುತ್ತಿದ್ದರೆ, ಹಲವರು ಪಾಳು ಬಿಟ್ಟಿದ್ದಾರೆ. ಬೇಸಾಯ ಕಡಿಮೆಯಾಗುತ್ತಾ ಹೋದಂತೆ ಹಡಿಲು ಭೂಮಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಳಿದುಳಿದ ಗದ್ದೆಗಳಲ್ಲಿ ರೈತರು ಬೇಸಾಯ ಮುಂದುವರಿಸಿಕೊಂಡು ಬರುತ್ತಿದ್ದು, ವ್ಯಾಪಕ ಮಳೆಯ ಕಾರಣ ಭತ್ತದ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಮಳೆ ಹೆಚ್ಚಾದ ಕಾರಣ ಬಿತ್ತಿದ ಬೀಜ ಕೊಳೆತು ಹೋಗಿತ್ತು. ಹೀಗಾಗಿ ಇದೀಗ ಎರಡನೇ ಬೆಳೆ ಬೆಳೆಯುತ್ತಿದ್ದೇವೆ. ನೆರೆ ಪೀಡಿತ ಪ್ರದೇಶದಲ್ಲಿ ಚಾಪೆ ನೇಜಿ ಉಪಯೋಗಕ್ಕೆ ಬಾರದಿರುವುದರಿಂದ ಬೀಜ ಹಾಕಿ ನೇಜಿ ಸಿದ್ಧಪಡಿಸಿಕೊಳ್ಳಬೇಕಿದೆ. ಇಷ್ಟರೊಳಗೆ ನಾಟಿ ಕಾರ್ಯ ಮುಗಿಯಬೇಕಿತ್ತು. ಆದರೆ ಹಲವೆಡೆ ಇನ್ನೂ ನಾಟಿ ಕಾರ್ಯ ಆರಂಭಿಸಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ವಿಠಲ, ಕೃಷಿಕರು, ಹಡವು ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net