ತಮನ್ನಾ ರಾಯಭಾರಿಗೆ ವಿರೋಧ

SRP_29-01jpj
Published on

ಶ್ರೀರಂಗಪಟ್ಟಣ: ನಾಡಿನ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯನ್ನಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಜಾನುವಾರುಗಳಿಗೆ ಸೋಪು ಹಚ್ಚಿ ಸ್ನಾನ ಮಾಡಿಸುವ ಮೂಲಕ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಪಟ್ಟಣ ಹೊರವಲಯದ ಬೊಮ್ಮೂರು ಅಗ್ರಹಾರ ಗ್ರಾಮದ ಬಯಲು ಪ್ರದೇಶದಲ್ಲಿ ಗುರುವಾರ ಮರವೇ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದನ-ಕರು ಮತ್ತು ಆಡುಗಳಿಗೆ ಮೈಸೂರು ಸ್ಯಾಂಡಲ್ ಸೋಪಿನಿಂದ ಸ್ನಾನ ಮಾಡಿಸಿ ನಟಿಯನ್ನು ರಾಯಭಾರಿ ಮಾಡುವ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಬಳಿಕ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ಮೈಸೂರು ರಾಜಮನೆತನದಿಂದ ಪ್ರಾರಂಭವಾದ ಸಾಕಷ್ಟು ಉತ್ಪನ್ನಗಳಿಗೆ ಅದರದ್ದೇ ಆದ ವೈಭವತೆಯ ಶ್ರೇಷ್ಠ ಇತಿಹಾಸವಿದೆ. ಮೈಸೂರು ಸ್ಯಾಂಡಲ್ ಸೋಪು ಶತಮಾನಗಳ ಹಿಂದೆಯೇ ತನ್ನ ಪ್ರಖ್ಯಾತಿಯನ್ನು ದೇಶ ಹಾಗೂ ವಿದೇಶದಲ್ಲೂ ಹೊಂದಿದ್ದು, ಕಾರ್ಪೊರೇಟ್ ಜಗತ್ತಿನ ಮೋಡಿಯ ಜಾಹೀರಾತುಗಳ ನಡುವೆ ಮರೆಯಾಗಿದೆ. ಇಂತಹ ಸಾಂಪ್ರದಾಯಿಕ ಉತ್ಪನ್ನವನ್ನು ಮತ್ತೆ ದೇಶದಲ್ಲಿ ಮುನ್ನೆಲೆಗೆ ತರಲು ಮೈಸೂರು ರಾಜವಂಶಸ್ಥರು ಅಥವಾ ಕನ್ನಡದಲ್ಲೇ ಅತ್ಯಂತ ಪ್ರಸಿದ್ಧ ನಟ-ನಟಿಯರು ಹಾಗೂ ಸೌಂದರ್ಯದಲ್ಲಿ ದೇಶದ ಜನರನ್ನು ಇತ್ತ ತಿರುಗುವಂತೆ ಮಾಡುವ ನವ ಪ್ರತಿಭಾನ್ವಿತ ರೂಪದರ್ಶಿಯರು ನಮ್ಮಲ್ಲೇ ಹಲವರು ಇದ್ದಾರೆ. ಅವರಿಗೆ ಅವಕಾಶ ಕೊಡುವುದನ್ನು ಬಿಟ್ಟು ಕನ್ನಡತನದ ಗಂಧ ಗಾಳಿ ತಿಳಿಯದ ನಟಿಗೆ 6.20 ಕೋಟಿ ರೂ. ನೀಡಿ ರಾಯಭಾರಿಯನ್ನಾಗಿಸಿರುವ ಸರ್ಕಾರ ನಡೆ ತೀವ್ರ ನಾಚಿಕೆಗೇಡು ಹಾಗೂ ಕನ್ನಡಿಗರ ತೆರಿಗೆ ಹಣವನ್ನು ಇಂತಹ ಕಾರಣಕ್ಕೆ ವ್ಯಯಿಸಿರುವ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲದಿದ್ದರೆ ಆ ಸೋಪನ್ನು ನಾವುಗಳೇ ಬಹಿಷ್ಕರಿಸಿ ನಮ್ಮ ದನ ಕರುಗಳ ಸ್ನಾನಕ್ಕೆ ಬಳಸುವುದಾಗಿ ಎಚ್ಚರಿಕೆ ನೀಡಿದರು.

ಮಂಡ್ಯ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ ಮಾತನಾಡಿ, ಸರ್ಕಾರ ತನ್ನ ಬಂಡತನದ ನಡೆ ತೋರಿದರೆ ಇಂತಹ ಹೋರಾಟವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ವೇದಿಕೆ ಪದಾಧಿಕಾರಿ ಅಂಕಶೆಟ್ಟಿ, ಮನೋಜ್, ಧನುಷ್, ಛಾಯಾದೇವಿ, ಜಯಮ್ಮಾ, ಮಂಗಳಮ್ಮಾ, ಗೌರಮ್ಮಾ, ಜಯಮ್ಮಾ, ದೇವಮ್ಮಾ, ಸುಮಿತ್ರಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net