ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ವಿರೋಧ

Published on

ಹುಣಸೂರು: ಹುಣಸೂರು ನಗರದ ತಾಲೂಕು ಕಚೇರಿಯ ಕಟ್ಟಡ ಸಂಕೀರ್ಣದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರಿಸುವುದನ್ನು ರೈತರು, ಸಾರ್ವಜನಿಕರು ಮತ್ತು ಜಿಲ್ಲಾ ದಸ್ತಾವೇಜು ಬರಹಗಾರರ ಸಂಘವು ವಿರೋಧಿಸಿದೆ.

ತಾಲೂಕು ಕಚೇರಿ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದು ನಿಜ. ಉಪನೋಂದಣಾಧಿಕಾರಿ ಕಚೇರಿಯೂ ಕೂಡ ಇದಕ್ಕೆ ಹೊರತಾಗಿಲ್ಲ. ದಾಖಲೆಗಳ ಕೊಠಡಿಯೂ ದುಸ್ಥಿತಿಯಲ್ಲಿರುವುದು ನಿಜ. ಹಾಗೆಂದ ಮಾತ್ರಕ್ಕೆ ಉಪನೋಂದಣಾಧಿಕಾರಿ ಕಚೇರಿಯ ದುರಸ್ತಿ ಕಾರ್ಯ ನಡೆಸದೇ ನಗರದಿಂದ 2 ಕಿ.ಮೀ.ದೂರದ ರಾಷ್ಟ್ರೀಯ ಹೆದ್ದಾರಿಯ ಬಳಿಯ ಬಡಾವಣೆಯೊಂದಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಇದರಿಂದ ರೈತರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಲಿದೆ. ತಾಲೂಕು ಆಡಳಿತ ಇತ್ತ ಗಮನಹರಿಸಿ ಕಚೇರಿ ಸ್ಥಳಾಂತರವನ್ನು ತಡೆಹಿಡಿಯಬೇಕೆಂದು ರೈತರಾದ ಪಾಪೇಗೌಡ, ರವಿ, ಕರಿಶೆಟ್ಟಿ, ಎಚ.ಎಸ್.ಚಂದ್ರಪ್ಪ, ದಸ್ತಾವೇಜು ಬರಹಗಾರರಾದ ಎ.ರಾಜಶೇಖರ್, ಸಣ್ಣಮಾದಯ್ಯ, ಸಂತೋಷ್‌ಕುಮಾರ್, ಸಿ.ಎಸ್.ನಾಗರಾಜ, ರವಿ ಇತರರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net