

*ಶ್ರೀರಾಮ ಸೇನಾಯಿಂದ ಪ್ರತಿಭಟನೆ
ಕನಕಪುರ
ರಾಮನಗರ ಜಿಲ್ಲೆಯ ಹೆಸರು ಬದಲಾವಣೇ ವಿರೋಧಿಸಿ ಶ್ರೀರಾಮಸೇನೆ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ವಸಂತಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ನಾಗಾರ್ಜುನಗೌಡ ಮಾತನಾಡಿ, ಐತಿಹಾಸಿಕ ಧಾರ್ಮಿಕ ಸಾಂಸ್ಕೃತಿಕ ಪ್ರತೀಕವಾದ ಹಾಗೂ ನೂರಾರು ವರ್ಷಗಳ ಇತಿಹಾಸವುಳ್ಳ ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿರುವುದು ಖಂಡನೀಯ. ಈ ದೇಶದ ಇತಿಹಾಸವನ್ನು ಓದದವರು ಇತಿಹಾಸ ಸೃಷ್ಟಿಸಲು ಸಾಧ್ಯವೇ?. ಇತಿಹಾಸವನ್ನೇ ಅರಿಯದವರು ಇತಿಹಾಸವನ್ನು ತಿರುಚಿ ಪವಿತ್ರವಾದ ಶ್ರೀರಾಮನ ಹೆಸರಿಗೆ ಕಳಂಕ ತಂದಿರುವುದಾಗಿ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕ್ರಮ ಖಂಡಿಸಿದರು.
ಹೆಸರು ಬದಲಾವಣೆ ಮುನ್ನ ಜಿಲ್ಲೆಯ ಜನರ ಬಳಿ ಚರ್ಚೆ ನಡೆಯಲಿಲ್ಲ, ಅವರ ಒಪ್ಪಿಗೆ ಪಡೆಯಲಿಲ್ಲ, ಸರ್ವಾಧಿಕಾರಿಗಳಂತೆ ಹೆಸರು ಬದಲಾವಣೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಅಣಕವಾಗಿದೆ, ಇಡೀ ಜಿಲ್ಲೆಯ ಜನ ವಿರೋಧಿ ಕ್ರಮವಾಗಿದೆ ಎಂದರು.
ಜನರ ಆಶಯಕ್ಕೆ ವಿರುದ್ಧವಾಗಿರುವ ರಾಜ್ಯ ಸರ್ಕಾರದ ಈ ನಿರ್ಣಯ ಹಿಂದಕ್ಕೆ ಪಡೆಯಲೇಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.