ಪೈಚಾರು ಹೊಸ ಬಸ್ ನಿಲ್ದಾಣಕ್ಕೆ ವಿರೋಧ

Sul_Bus stand
Published on

ಸುಳ್ಯ: ಪೈಚಾರು ಜಂಕ್ಷನ್‌ನಲ್ಲಿ ಪ್ರಯಾಣಿಕರ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಈ ಸ್ಥಳ ಅವೈಜ್ಞಾನಿಕ ಎಂದು ಸ್ಥಳೀಯರು ವಿರೋಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಾಲ್ಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಮಿಸಿ ಮಾತುಕತೆ ನಡೆದ ನಂತರ ವಿಷಯ ತಾತ್ಕಾಲಿಕವಾಗಿ ಶಮನಗೊಂಡ ಘಟನೆ ಶನಿವಾರ ನಡೆದಿದೆ.

ಇತ್ತೀಚೆಗೆ ಪೈಚಾರಿನಲ್ಲಿ ಚತುಷ್ಪತ ರಸ್ತೆ ಕಾಮಗಾರಿ ನಡೆದಿದ್ದು, ಆ ಸಂದರ್ಭದಲ್ಲಿ ಅಲ್ಲಿದ್ದ ಎರಡು ಪ್ರಯಾಣಿಕರ ಬಸ್ ತಂಗುದಾಣವನ್ನು ತೆರವುಗೊಳಿಸಲಾಗಿತ್ತು. ಇದೀಗ ಅದರ ಬದಲಿಗೆ ಪೈಚಾರು ಸೇತುವೆಯ ಆರಂಭಗೊಳ್ಳುವ ಸ್ಥಳ ಪೆಟ್ರೋಲ್ ಬಂಕ್ ಸಮೀಪ ಮತ್ತು ಜಂಕ್ಷನ್‌ನಿಂದ ಸೋಣಂಗೇರಿ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಮತ್ತೊಂದು ತಂಗುದಾಣಕ್ಕೆ ಕಳೆದ ಎರಡು ದಿನಗಳಿಂದ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಎರಡೂ ಜಾಗವೂ ಅವೈಜ್ಞಾನಿಕವಾಗಿದ್ದು ಅಲ್ಲದೆ ಪೆಟ್ರೋಲ್ ಬಂಕ್ ಬಳಿ ನಿರ್ಮಾಣಗೊಳ್ಳಲಿರುವ ತಂಗುದಾಣ ಜಾಲ್ಸೂರು ಗ್ರಾಮ ವ್ಯಾಪ್ತಿಗೆ ಬರದೆ ನಗರ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು ಜಂಕ್ಷನ್‌ನಿಂದ ಕೆಲವು ಮೀಟರ್ ದೂರದಲ್ಲಿ ಆಗುತ್ತಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಕಡೆ ಸೋಣಂಗೇರಿ ರಸ್ತೆಯ ಬದಿಯಲ್ಲಿ ತಂಗುದಾಣ ನಿರ್ಮಾಣಗೊಳ್ಳುತ್ತಿರುವ ಜಾಗದಲ್ಲಿ ಇತ್ತೀಚೆಗೆ ಮಣ್ಣು ಕುಸಿತ ಉಂಟಾಗಿದ್ದು, ಆ ಸ್ಥಳದಲ್ಲಿ ಮರಗಳು ಅಪಾಯದ ಸ್ಥಿತಿಯಲ್ಲಿವೆ. ಆದ್ದರಿಂದ ಈ ಎರಡೂ ಜಾಗವನ್ನು ಬದಲಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿತ್ತು.
ಆದರೆ ಈ ಎರಡೂ ಸ್ಥಳಗಳನ್ನು ಹೊರತು ಪಡಿಸಿ ಬೇರೆ ಕಡೆ ಜಾಗ ಇಲ್ಲ. ಇದ್ದರೂ ಅದು ಖಾಸಗಿ ವ್ಯಕ್ತಿಯವರ ಪಟ್ಟಾ ಜಾಗ ಆಗಿದ್ದು, ಆಲ್ಲಿ ಕಟ್ಟಲು ಅವರ ಆಕ್ಷೇಪ ಇದೆ. ಪರ್ಯಾಯ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ನಾವು ಅಲ್ಲಿ ತಂಗುದಾಣ ಮಾಡಿಕೊಡುತ್ತೇವೆ ಎಂಬುವುದು ತಂಗುದಾಣ ನಿರ್ಮಾಣ ಮಾಡುವ ಗುತ್ತಿಗೆದಾರರ ವಾದವಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಾಲ್ಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿರುಮಲೇಶ್ವರಿ ಮರಸಂಕ ಹಾಗೂ ಪಂಚಾಯಿತಿ ಸಿಬ್ಬಂದಿ ಚಿದಾನಂದ ಪರಿಶೀಲನೆ ನಡೆಸಿದರು. ಬೇರೆ ಸರಿಯಾದ ಜಾಗ ಇಲ್ಲದಿರುವ ಕಾರಣ ಈಗ ಕಟ್ಟುತ್ತಿರುವ ಜಾಗದಲ್ಲಿಯೇ ಮೇಲ್ಬಾಗದ ಅಪಾಯಕಾರಿ ಮರ ಮತ್ತು ಮಣ್ಣು ತೆರವುಗೊಳಿಸಿ ಮುಂಜಾಗ್ರತೆ ವಹಿಸಿ ತಂಗುದಾಣ ನಿರ್ಮಿಸುವಂತೆ ಸೂಚನೆ ನೀಡಿದರು.

ಜಾಲ್ಸೂರು ಗ್ರಾಮ ಪಂಚಾಯಿತಿ ಸದಸ್ಯ ಮುಜೀಬ್ ಪೈಚಾರ್, ಮಾಜಿ ಸದಸ್ಯ ಪ್ರವೀಣ್ ಪಿಲಿಕ್ಕೋಡಿ, ಸ್ಥಳೀಯ ಉದ್ಯಮಿ ಶಾಫಿ ಬೋಳುಬೈಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net