

ಹಾವೇರಿ: ಆನ್ಲೈನ್ ಮದ್ಯ ಮಾರಾಟ ಹಾಗೂ ಹೆದ್ದಾರಿಗಳಲ್ಲಿ ಸಿಎಲ್-7 ಅನುಮತಿ ಸ್ಥಗಿತಗೊಳಿಸುವುದು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ ಮಾತನಾಡಿ, ಅಬಕಾರಿ ಇಲಾಖೆಯಲ್ಲಿನ ಅನೇಕ ನಿಯಮಗಳ ತಿದ್ದುಪಡಿಯಿಂದ ಚಿಲ್ಲರೆ ಮದ್ಯ ಮಾರಾಟಗಾರರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಿಎಲ್-7 ಮದ್ಯದಂಗಡಿಗಳ ಅನುಮತಿಯನ್ನು ಕಡ್ಡಾಯವಾಗಿ ಮಾನದಂಡದ ಅನುಸಾರ ನೀಡಬೇಕು. ಎಂಎಸ್ಐಎಲ್ ಅಂಗಡಿಗಳನ್ನು ಹೆಚ್ಚುವರಿಯಾಗಿ ತೆರೆಯಬಾರದು. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿಸಿರುವ ಅಬಕಾರಿ ಶುಲ್ಕವನ್ನು ಹಿಂಪಡೆಯಬೇಕು. ಮದ್ಯ ಮಾರಾಟದ ಲಾಭಾಂಶವನ್ನು ಶೇ. 20ಕ್ಕೆ ಹೆಚ್ಚಿಸಬೇಕು. ಅಬಕಾರಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಈ ಹಿಂದೆಯೂ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಸ್ಪಂದನೆ ದೊರೆತಿಲ್ಲ. ಇದಕ್ಕೂ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಸಿಎಲ್-9ರಲ್ಲಿ ಹೆಚ್ಚುವರಿ ಕೌಂಟರ್ ನೀಡಬೇಕು. ಎಲ್ಲ ಮದ್ಯಗಳ 60-90 ಎಂಎಲ್ಗಳ ಪ್ಯಾಕಿಂಗ್ ಒದಗಿಸಬೇಕು. ಸತತವಾಗಿ ಬ್ಯಾಂಕ್ ರಜೆ ಇರುವ ದಿನಗಳಂದು ಕೆಎಸ್ಬಿಸಿಎಲ್ನವರು ಟಿಒಡಿ ರೀತಿಯಲ್ಲಿ ಮದ್ಯ, ಬಿಯರ್ ಒದಗಿಸಬೇಕು. ಸಿಎಲ್-5 ಸನ್ನದುಗಳ ನಿಯಮ ಸರಳೀಕೃತಗೊಳಿಸಬೇಕು. ಅಬಕಾರಿ ಅಧಿಕಾರಿಗಳಿಗೆ ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಕಾನೂನು ಮಾಹಿತಿ ಶಿಬಿರ, ಚರ್ಚಾ ಗೋಷ್ಠಿಗಳನ್ನು ಆಯೋಜಿಸಬೇಕು.
ಕೆಎಸ್ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿಯ ಬಿಲ್ಗಳನ್ನು ರಹದಾರಿಯನ್ನಾಗಿ ಉಪಯೋಗಿಸಲು ಅನುಮತಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಅಬಕಾರಿ ಸಚಿವರು, ಅಪರ ಮುಖ್ಯ ಕಾರ್ಯದರ್ಶಿ, ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಶೀಲವಂತ, ಸನ್ನದುದಾರರಾದ ಆರ್. ನಾಗರಾಜ್, ಎಸ್. ಅಮರೇಂದ್ರ, ಕೆ.ಆರ್. ಬ್ಯಾಡಗಿ, ಬಿ. ಶಂಕರ, ಸಿ.ಆರ್. ಕಲಾಲ, ನಾಗರಾಜ ಕುಲಕರ್ಣಿ, ಎಂ.ಎಸ್. ಪಾಟೀಲ, ಜೆ.ಡಿ. ಕಲಾಲ ಇತರರು ಪ್ರತಿಭಟನೆಯಲ್ಲಿದ್ದರು.