

ದಾಂಡೇಲಿ: ಕಾಳಿ ನದಿಯಿಂದ ಅಳ್ನಾವರಕ್ಕೆ ನಿರಂತರ ಕುಡಿಯುವ ನೀರು ಯೋಜನೆ ವಿರೋಧಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಇಂಟೇಕ್ನ ಉತ್ತರ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ರಾಮಲಿಂಗ ಜಾಧವ ಮಾತನಾಡಿ, ನದಿ ನೀರನ್ನು ಬೇರೆಡೆ ಒಯ್ದರೆ ವೆಸ್ಟ್ಕೋಸ್ಟ್ ಪೇಪರ್ ಮಿಲ್ ಮತ್ತು ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು, ದಾಂಡೇಲಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಕಾಳಿ ನದಿಯನ್ನೇ ಅವಲಂಬಿಸಿ ನಡೆಸುತ್ತಿರುವ ಜಲಕ್ರೀಡೆಗಳಿಗೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಕಾಳಿ ನದಿ ನೀರನ್ನು ಹೊರ ಜಿಲ್ಲೆಗೆ ಒಯ್ಯುವ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಗೌರವಾಧ್ಯಕ್ಷ ಎಸ್.ಎಂ. ದಬಗಾರ, ಅಧ್ಯಕ್ಷ ಅಕ್ರಮ ಖಾನ, ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ಗಡಪ್ಪನವರ, ಶಿವಾನಂದ ಗಗ್ಗರಿ, ವಹಾಬ ಬಾಸೂರಿ, ಜೆಡಿಎಸ್ನ ಸ್ಥಳೀಯ ಘಟಕದ ಅಧ್ಯಕ್ಷ ಗೌರೀಶ ಬಾಬ್ರೆಕರ್ ಮಾತನಾಡಿದರು.
ಸಮಿತಿ ಸದಸ್ಯರಾದ ಇಲಿಯಾಸ್ ಕಾಟಿ, ಮುಜಿಬಾ ಚಬ್ಬಿ, ನೀಲಾ ಮಾದರ, ಗೌರೀಶ ನಾಯ್ಕ, ಸಿದ್ದರಾಜ ಗಸ್ತಿ, ಗೌಸ ಯರಗಟ್ಟಿ, ಮಹಮ್ಮದ ಹುಸೇನ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ ಕೋಠಾರಿ, ಸಾದಿಕ್ ಮುಲ್ಲಾ ಇತರರು ಪಾಲ್ಗೊಂಡಿದ್ದರು.
ಯೋಜನೆ ವಿವರ: 71.90 ಕೋಟಿ ರೂ. ವೆಚ್ಚದಲ್ಲಿ ಅಳ್ನಾವರ ಪಟ್ಟಣ ಮತ್ತು ಮಾರ್ಗದ 14 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಇದಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ಈಗಾಗಲೇ ದಾಂಡೇಲಿಯಲ್ಲಿ ಜಾಕ್ವೆಲ್ ಕಾಮಗಾರಿ ನಡೆದಿದೆ.