

ಬಿಡದಿ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಪ್ರಕ್ರಿಯೆ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ. ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಲು ರೈತರು ಒಕ್ಕೊರಲಿನಿಂದ ನಿರ್ಧಾರ ಮಾಡಿದ್ದಾರೆ. ಹೌದು. ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬಿಡದಿಯ ಕಂಚುಗಾರನಹಳ್ಳಿ ಹಾಗೂ ಬೈರಮಂಗಲ ಗ್ರಾಪಂ ವ್ಯಾಪ್ತಿಯಲ್ಲಿನ 27 ಗ್ರಾಮಗಳ ವ್ಯಾಪ್ತಿಯಲ್ಲಿ 9,600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಭೂಸ್ವಾಧೀನ ಕ್ರಮ ವಿರೋಧಿಸಲು ರೈತರು ಹೊಸೂರು ಗ್ರಾಮದ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ಮಂಗಳವಾರ 500ಕ್ಕೂ ಹೆಚ್ಚು ರೈತರು ಒಂದೆಡೆ ಸೇರಿ ಮುಂದಿನ ಆಗು-ಹೋಗುಗಳ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚೆಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲರೂ ಭೂಸ್ವಾಧೀನ ಆಗಬಾರದು ಎಂದು ನಿಲುವನ್ನು ಸ್ಪಷ್ಟಪಡಿಸಿದರು.
ಸದ್ಯದಲ್ಲೇ ಪಾದಯಾತ್ರೆ
ಹೊಸೂರು ಪೂರ್ವಭಾವಿ ಸಭೆಯಲ್ಲಿ ಮುಕ್ತವಾಗಿ ಭೂಸ್ವಾಧೀನ ವಿಚಾರವಾಗಿ ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಲು ಬಿಡಬಾರದು. ಈ ನಿಟ್ಟಿನಲ್ಲಿ ಹೋರಾಟ ಮಾಡಲು ನಾವು ಸಿದ್ಧ. ಅಂತಿಮವಾಗಿ ಬೈರಮಂಗಲ ಕ್ರಾಸ್‌ನಿಂದ ರಾಮನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಲಾಯಿತು. ಸದ್ಯದಲ್ಲೆ ದಿನಾಂಕ ನಿಗದಿ ಮಾಡಿ ಆಟೋ ಮೂಲಕ ಪ್ರತಿ ಗ್ರಾಮಗಳಲ್ಲಿ ಪ್ರಚಾರ ಮಾಡಲು ತೀರ್ಮಾನಿಸಲಾಯಿತು.
ಜಂಟಿ ಕ್ರಿಯಾ ಸಮಿತಿ
ಹೋರಾಟಕ್ಕೆ ಸಮಿತಿ ಇರಬೇಕೆಂಬ ಇಂಗಿತ ಸಭೆಯಲ್ಲಿ ವ್ಯಕ್ತವಾಯಿತು. ಹಾಗಾಗಿ ಜಂಟಿ ಕ್ರಿಯಾ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು. ಪ್ರತಿ ಗ್ರಾಮದಿಂದ ಇಬ್ಬರು ಹೋರಾಟ ಮನೋಭಾವ ಇರುವವರ ಹೆಸರು ನೋಂದಣಿಗೆ ಸೂಚಿಸಲಾಯಿತು. ಯಾವುದೇ ಸಮಯದಲ್ಲಿ ಕರೆದರೂ ಹೋರಾಟಕ್ಕೆ ಬರಲು ಸಿದ್ಧರಿರಬೇಕು ಎಂದು ಸೂಚನೆ ನೀಡಲಾಯಿತು.
ಮಾತಿನ ಚಕಮಕಿ
ಸಭೆ ಪ್ರಾರಂಭವಾಗಿ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಹೊಸೂರಿನ ಸಿದ್ದರಾಜು ಮಾತನಾಡಿ, 18 ವರ್ಷಗಳಿಂದ ನಾವು ರೆಡ್‌ಜೋನ್‌ಗೆ ಸಿಲುಕಿಕೊಂಡಿದ್ದೇವೆ. ಈ ವಿಚಾರವಾಗಿ ನಾನು ಈ ಹಿಂದೆ ವಿರೋಧಿಸಿದ್ದೆ. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಲವರು ಪರವಾಗಿ ಇರಬೇಕಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಇಲ್ಲಿ ಯಾವುದೇ ಪರ ವಿರೋಧ ಚರ್ಚೆ ಬೇಡ ಎಂದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅದೇ ಗ್ರಾಮದ ಕೆಲವರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಆರೋಗ್ಯಕರವಾಗಿ ನಡೆಯುತ್ತಿದ್ದ ಚರ್ಚೆ ಈ ಜಗಳದಿಂದ ದಿಕ್ಕು ತಪ್ಪಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಶವಸಂಸ್ಕಾರಕ್ಕೆ ಜಾಗ ಇರಲ್ಲ
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂಸ್ವಾಧೀನ ಮಾಡಿಕೊಂಡರೆ ನಮ್ಮ ಹಾಗೂ ನಮ್ಮ ತಂದೆ-ತಾಯಂದಿರ ಶವ ಸಂಸ್ಕಾರ ಮಾಡಲು ಒಂದಿಂಚೂ ಜಾಗ ಇರುವುದಿಲ್ಲ. ಅಲ್ಲದೆ, ನಮ್ಮ ಜಮೀನಲ್ಲಿರುವ ಪೂರ್ವಜರ ಘೋರಿಗಳ ಮೇಲೆ ಏನ್-ಏನ್ ಕಟ್ಟುತ್ತಾರೊ ಅದೆಲ್ಲವನ್ನು ಕಣ್ಣಾರೆ ನೋಡಬೇಕಾಗುತ್ತದೆ. ಇರುವ ತುಂಡು ಭೂಮಿ ಕಳೆದುಕೊಂಡರೆ ಮುಂದೆ ಎಲ್ಲಿಗೆ ಹೋಗಬೇಕು? ಹಾಗಾಗಿ ಭೂಸ್ವಾಧೀನ ಪ್ರಕ್ರಿಯೆ ಬೇಡ ಎಂದು ಹಲವರು ತಿಳಿಸಿದರು.
ಈ ಭಾಗದ ರೈತರ ಅಭಿಪ್ರಾಯ ಪಡೆಯದೆ ಹಾಗೂ ಗಮನಕ್ಕೂ ತರದೆ ಭೂಸ್ವಾಧೀನ ಮಾಡಲು ಹೊರಟಿದ್ದಾರೆ. 9,600 ಎಕರೆ ಭೂಮಿ ನೀರಾವರಿಯಿಂದ ಕೂಡಿದೆ. ಈ ಭಾಗದಲ್ಲಿ ಪ್ರತಿದಿನ 6 ಲಕ್ಷ ಲೀಟರ್ ಹಾಲನ್ನು ಉತ್ಪತ್ತಿ ಮಾಡಲಾಗುತ್ತಿದೆ. 2.500 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ತೆಂಗು ಇದೆ. 2.500 ಸಾವಿರ ಹೇಕ್ಟೆರ್ ಪ್ರದೇಶದಲ್ಲಿ ರೇಷ್ಮೆ ಇದ್ದು, ಉಳಿದಂತೆ ಮಾವು ಹಾಗೂ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಕೃಷಿ ಭೂಮಿ ಏಕೆ ಭೂಸ್ವಾಧೀನ ಮಾಡುತ್ತೀರಿ. ಮಳೆ ಆಶ್ರಯದ ಜಾಗ ಬೇರೆಡೆ ಗುರುತಿಸಿ. ಅಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿಕೊಳ್ಳಲಿ. ಇಲ್ಲಿ ಒಂದರಿಂದ ಒಂದೂವರೆ ಸಾವಿರ ಎಕರೆ ಸರ್ಕಾರಿ ಜಾಗ ಇದ್ದು, ಇದನ್ನು ಖಾಸಗಿ ಕಾರ್ಖಾನೆಗಳಿಗೆ ನೀಡಿ ಹಣ ಹೊಡೆಯುವ ಸಂಚನ್ನು ಮೂರೂ ರಾಜಕೀಯ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. - ಪ್ರಕಾಶ್ ತಾಪಂ ಮಾಜಿ ಸದಸ್ಯ ಭೂಸ್ವಾಧೀನದ ಬಗ್ಗೆ ನಮಗೆ ಅರಿವೆ ಇಲ್ಲ. ಈ ಬಗ್ಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ನಮ್ಮ ಭೂಮಿ ಕಬಳಿಕೆ ಮಾಡಲು ಸರ್ಕಾರ ಮುಂದಾಗಿದೆ. ಬಹುತೇಕ ಮಂದಿಗೆ ಕಡಿಮೆ ಜಮೀನಿದೆ. ಇಂತಹ ಸಮಯದಲ್ಲಿ ಭೂಸ್ವಾಧೀನ ಮಾಡಿಕೊಂಡರೆ ಮುಂದಿನ ಪೀಳಿಗೆಯ ಗತಿ ಏನೂ. ನಾವು ರೈತರ ಮಕ್ಕಳು, ರೈತರ ಮಕ್ಕಳಾಗೆ ಇರುತ್ತೇವೆ. ನಾವು ಈ ವಿಚಾರದಲ್ಲಿ ಹೋರಾಟ ಮುಂದುವರಿಸುತ್ತೇವೆ. - ಗೀತಾ ಅರಳಾಳುಸಂದ್ರ