

ಸುಳ್ಯ: ಆಲೆಟ್ಟಿ ಪಂಚಾಯಿತಿ ವ್ಯಾಪ್ತಿಗೆ ಘನತ್ಯಾಜ್ಯ ಘಟಕ ನಿರ್ಮಿಸಲು ನಾರ್ಕೋಡು ವಾರ್ಡಿಗೆ ಸಂಬಂಧಿಸಿದಂತೆ ಮೈಂದೂರು ಎಂಬಲ್ಲಿ ಜಾಗ ಗುರುತಿಸಲಾಗಿದ್ದು, ಈ ಜಾಗದಲ್ಲಿ ಕಸ ಹಾಕದಂತೆ ಶನಿವಾರ ಬ್ಯಾನರೊಂದು ಪ್ರತ್ಯಕ್ಷವಾಗಿದೆ. ಈ ಬಗ್ಗೆ ಪರಿಸರದ ನಾಗರಿಕರ ಜತೆ ಪಂಚಾಯಿತಿ ಆಡಳಿತ ಮಂಡಳಿಯವರು ಸಮಾಲೋಚನಾ ಸಭೆ ನಡೆಸಿದ್ದರು.
ಪರಿಸರದ ನಾಗರಿಕರು ಘಟಕ ನಿರ್ಮಾಣಕ್ಕೆ ತೀವ್ರವಾಗಿ ವಿರೋಧಿಸಿದ್ದರು. ಇದೀಗ ಮೈಂದೂರು, ಕಟ್ಟೆಕ್ಕಳ, ಎಲಿಕ್ಕಳ, ಭೂತಕಲ್ಲು, ಕುಡೆಕಲ್ಲು ಭಾಗದ ನಾಗರಿಕರು ಎಂಬ ಹೆಸರಿನಡಿಯಲ್ಲಿ ಪರಿಸರದ ನಾಗರಿಕರ ಜತೆ ಮಾತುಕತೆ ನಡೆಸದೆ ಸಹಿ ಸಂಗ್ರಹಿಸದೆ ಕಸ ಹಾಕಲು ಘಟಕ ನಿರ್ಮಾಣದ ಕುರಿತು ಏಕಮುಖವಾಗಿ ನಿರ್ಧಾರ ಕೈಗೊಂಡಿರುತ್ತಾರೆ. ಈ ಜಾಗದಲ್ಲಿ ಪೂರ್ವಜರು ಆರಾಧಿಸಿಕೊಂಡು ಬರುತ್ತಿರುವ ನಾಗ ಸಾನಿಧ್ಯ, ಗುಳಿಗ ದೈವ ಸಾನ್ನಿಧ್ಯ ಹಾಗೂ ಇತರ ದೈವಗಳ ಆರಾಧನೆ ಸ್ಥಳವಾಗಿದೆ. ಘಟಕ ನಿರ್ಮಿಸುವುದರಿಂದ ಪರಿಸರ ನಾಶವಾಗುವುದಲ್ಲದೆ ಕಾಡುಪ್ರಾಣಿಗಳಿಗೆ ತೊಂದರೆಯಾಗುವುದು. ಆದ್ದರಿಂದ ಇಲ್ಲಿ ಕಸ ಹಾಕುವುದಕ್ಕೆ ತೀವ್ರ ವಿರೋಧವಿದೆ ಎಂಬ ಬ್ಯಾನರ್ ಹಾಕಲಾಗಿದೆ.