ಬಸ್​ ದರ ಏರಿಕೆಗೆ ವಿರೋಧ

ramanagara bus protest
Published on

* ಜಾಲಮಂಗಲದಲ್ಲಿ ಬಸ್​ಗಳನ್ನು ತಡೆದು ಪ್ರತಿಭಟನೆ

ರಾಮನಗರ

ಸಾರಿಗೆ ಬಸ್​ಗಳ ಪ್ರಯಾಣ ದರ ಹೆಚ್ಚಳ ಖಂಡಿಸಿ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಬುಧವಾರ ಸಾರ್ವಜನಿಕರು ಮತ್ತು ಜೈಬೀಮ್​ ಸಂಟನೆ ಕಾರ್ಯಕರ್ತರು ಕೆಎಸ್​ಆರ್​ಟಿಸಿ ಬಸ್​ಗಳನ್ನು ತಡೆದು ದಿಢೀರ್​ ಪ್ರತಿಭಟನೆ ನಡೆಸಿದರು.

ರಾಮನಗರದಿಂದ ಜಾಲಮಂಗಲಕ್ಕೆ 16 ಕಿ.ಮೀ ಅಂತರವಿದ್ದು, ಪ್ರತಿನಿತ್ಯ ಹತ್ತಾರು ಬಸ್​ಗಳು ಓಡಾಟ ನಡೆಸುತ್ತವೆ. ಜಾಲಮಂಗಲಕ್ಕೆ ರಾಮನಗರ&ಮಾಗಡಿ ಪ್ರಮುಖ ರಸ್ತೆಯಾಗಿದ್ದು, ಕುಣಿಗಲ್​ ಕಡೆಗೂ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಪ್ರಸ್ತುತ ಕೆಎಸ್​ಆರ್​ಟಿಸಿ ಬಸ್​ಗಳೇ ಪ್ರಮುಖ ಸಾರಿಗೆಯಾಗಿದೆ. ನಿತ್ಯ ಸಾವಿರಾರು ಜನರು ಅದರಲ್ಲೆ ಪ್ರಯಾಣಿಸುತ್ತಾರೆ. ಇಂತಹ ಸಾರಿಗೆ ಸಂಪರ್ಕದ ಪ್ರಮುಖ ಗ್ರಾಮಕ್ಕೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹೊಸ ದರ ಏರಿಕೆಯಲ್ಲಿ 19 ರೂ. ಇದ್ದ ದರಕ್ಕೆ 29 ರೂ. ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ ಜಾಲಮಂಗಲ ಮಾಗಡಿ ಅಕ್ಕೂರು ಹುಲಿಯೂರುದುರ್ಗ ರಾಮನಗರದ ಬಸ್​ಗಳನ್ನು ಸಾರ್ವಜನಿಕರು ತಡೆದು ಪ್ರತಿಭಟಿಸಿದರು.

ಹೊಸ ದರ ಅವೈಜ್ಞಾನಿಕವಾಗಿದೆ. ಸಾರಿಗೆ ಹೊಸ ದರದಂತೆ 2.85 ಪೈಸೆ ದರ ಹೆಚ್ಚಳ ಆಗಬೇಕು. ಆದರೆ, ಶೇ.50 ದರ ಒಂದೇ ಬಾರಿ ಏರಿಕೆ ಮಾಡಿ ಜನರಿಗೆ ಬರೆ ಎಳೆಯಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬರಬೇಕು. ದರ ಪರಿಷ್ಕರಣೆ ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು.

ಸಾರಿಗೆ ಟಕ ವ್ಯವಸ್ಥಾಪಕ ಮಂಜುನಾಥ್​, ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ಸಾರಿಗೆ ಟಕ ಅಧಿಕಾರಿ ದರ ಪರಿಷ್ಕರಣೆ ಸಂಬಂಧ ಸೋಮವಾರದೊಳಗೆ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಜನರನ್ನು ಸಮಾಧಾನಿಸಿ ಪ್ರತಿಭಟನೆ ಕೈ ಬಿಡಿಸಿದರು.

ಬೆಳಗ್ಗೆ 7.30 ಗಂಟೆಗೆ ಬಸ್​ ತಡೆದು ಪ್ರತಿಭಟನೆಗಿಳಿದ ಪ್ರತಿಭಟನಾಕಾರರು ಬೆಳಗ್ಗೆ 11 ಗಂಟೆಗೆ ಅಂತ್ಯವಾಯಿತು. ಬಸ್​ನಲ್ಲಿದ್ದ ಪ್ರಯಾಣಿಕರು ಬಸವಳಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಸದಸ್ಯರಾದ ಶ್ರೀಕಾಂತ್​, ಜೈಭೀಮ್​ ಸಂಟನೆಯ ಸುರೇಶ್​, ಮುಖಂಡರಾದ ರೇವಣ್ಣ, ರಾಮಣ್ಣ, ಕೃಷ್ಣಪ್ಪ, ಚಂದನ್​ ಮತ್ತಿತರರು ಇದ್ದರು.

ಬಸ್​ ದರ ಸರ್ಕಾರ ಏರಿಸಿದೆ. ಆದರೆ, ಏಕಾಏಕಿ ನಿಯಮದಂತೆ ಏರಿಸುವ ಬದಲು ಸಾರಿಗೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಶೇ. 50 ದರ ಏರಿಸಿ ಪ್ರಯಾಣಿಕರ ಮೇಲೆ ಗದಾ ಪ್ರಹಾರ ನಡೆಸಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಹಿಡಿದ ಕನ್ನಡಿ. ಈಗಾಗಲೇ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲ.

> ದಿನೇಶ್​, ಗ್ರಾಪಂ ಮಾಜಿ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net