ಬಸದಿಗಳ ಆರಕ್ಷಿತ ಸ್ಮಾರಕ ಪ್ರಸ್ತಾವನೆಗೆ ವಿರೋಧ : ಜಿಲ್ಲಾಧಿಕಾರಿಗಳ ಮೂಲಕ ಆಕ್ಷೇಪಣೆ ಸಲ್ಲಿಕೆ

New Project (18)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬಸದಿಗಳನ್ನು ಆರಕ್ಷಿತ ಸ್ಮಾರಕ ಎಂದು ಘೋಷಿಸುವುದನ್ನು ಕೈಬಿಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಜೈನ್ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.

ಪುರಾತತ್ವ ಇಲಾಖೆ ಬೆಳ್ತಂಗಡಿ ತಾಲೂಕಿನ ಮತ್ತು ಜಿಲ್ಲೆಯ ಹಲವು ಬಸದಿಗಳನ್ನು ಅರಕ್ಷಿತ ಸ್ಮಾರಕಗಳೆಂದು ಗುರುತಿಸಿ ಘೋಷಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದೆ. ಜಿಲ್ಲೆಯ ಜೈನ ಬಸದಿಗಳು ಪುರಾತನ ಬಸದಿಗಳಾಗಿದ್ದರೂ ಅವುಗಳ ಅಭಿವೃದ್ಧಿಯನ್ನು ಜೈನ ಸಮಾಜವೇ ಮಾಡುತ್ತಾ ಬಂದಿದ್ದು ಅಲ್ಲಿ ಧಾರ್ಮಿಕ ವಿಧಿವಿಧಾನಗಳು ನಿತ್ಯ ನಡೆಯುತ್ತಿದೆ. ಈ ಬಸದಿಗಳನ್ನು ಅರಕ್ಷಿತ ಸ್ಮಾರಕ ಎಂದು ಘೋಷಿಸುವುದರಿಂದಾಗಿ ಇಲ್ಲಿನ ಎಲ್ಲ ಕಾರ್ಯಗಳಿಗೆ ಅಡಚಣೆಯುಂಟಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಈ ಬಸದಿಗಳನ್ನು ಆರಕ್ಷಿತ ಸ್ಮಾರಕ ಎಂದು ಘೋಷಿಸುವುದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಬಂಗಾಡಿ ಶ್ರೀ ಶಾಂತಿನಾಥ ಬಸದಿ, ಬೈಪಾಡಿ ಶ್ರೀ ಶಾಂತಿ ನಾಥ ಬಸದಿ, ಅಳದಂಗಡಿ ಶ್ರೀ ಪಾರ್ಶ್ವನಾಥ ಬಸದಿ, ಬಂಗಾಡಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಬೈಲಂಗಡಿ ಶ್ರೀ ಪಾರ್ಶ್ವನಾಥ ಬಸದಿ, ಶಿಶಿಲ ಚಂದ್ರನಾಥ ಬಸದಿಯನ್ನು ಆರಕ್ಷಿತ ಸ್ಮಾರಕಗಳು ಎಂದು ಗುರುತಿಸಿದೆ. ಈಗ ಆರಕ್ಷಿತ ಸ್ಮಾರಕಗಳೆಂದು ಗುರುತಿಸಲಾಗಿರುವ ಬಸದಿಗಳು ಸದ್ಯ ಸುಸ್ಥಿತಿಯಲ್ಲಿದ್ದು ಪೂಜೆ, ಧಾರ್ಮಿಕ ವಿಧಿವಿಧಾನಗಳು, ಸಂಪ್ರದಾತೆ ಆರಾಧನೆಗಳು ಇಲ್ಲಿ ನಿರಂತರ ನಡೆಯುತ್ತಿವೆ. ಏಕಾಏಕಿ ಈ ಬಸದಿಗಳನ್ನು ಆರಕ್ಷಿತ ಸ್ಮಾರಕ ಎಂದು ಘೋಷಿಸುವುದರಿಂದ ಈ ಬಸದಿಗಳಿಗೆ ಒಳಪಟ್ಟ ಜೈನ ಧರ್ಮೀಯರಿಗೆ ತಮ್ಮ ಆಚರಣೆಗಳನ್ನು ನಡೆಸಲು ಅಡಚಣೆಯುಂಟಾಗುತ್ತದೆ. ಕಾಯ್ದೆಯ ನಿಬಂಧನೆಗಳಿಂದ ಪ್ರತಿನಿತ್ಯದ ಕಾರ್ಯಗಳಿಗೂ ತೊಂದರೆಯಾಗುತ್ತದೆ. ಸಮಾಜದವರಿಗೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸುಸ್ಥಿತಿಯಲ್ಲಿರುವ ಬಸದಿಗಳು ಅಜೀರ್ಣಗೊಳ್ಳುವ ಸಾಧ್ಯತೆಗಳೂ ಇವೆ. ಇದರಿಂದಾಗಿ ಬಸದಿಗಳನ್ನು ಆರಕ್ಷಿತ ಸ್ಮಾರಕಗಳ ಪಟ್ಟಿಯಿಂದ ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅಳದಂಗಡಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್ ಜೈನ್, ಡಾ.ಕೆ.ಜಯಕೀರ್ತಿ ಜೈನ್ ಧರ್ಮಸ್ಥಳ, ಸುರೇಂದ್ರ ಕುಮಾರ್ ಜೈನ್ ಧರ್ಮಸ್ಥಳ, ಯಶೋಧರ ಬಲ್ಲಾಳ್ ಬಂಗಾಡಿ ಅರಮನೆ, ಅಜಿತ್ ಕುಮಾರ್ ಉಳಿಯಬೀಡು, ವೀರೇಂದ್ರ ಕುಮಾರ್ ಅಳದಂಗಡಿ, ಪ್ರಮೋದ್ ಕುಮಾರ್ ಬಳಂಜ, ಜಿತೇಶ್ ಜೈನ್ ಮಂಗಳೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net