ಗ್ರಾಮೀಣ ಪ್ರದೇಶಕ್ಕೆ ಗಡಿ ಗುರುತು : ಸುಬ್ರಹ್ಮಣ್ಯದಲ್ಲಿ ರೈತರ ಚಿಂತನಾ ಸಭೆಯಲ್ಲಿ ನಿರ್ಣಯ

Published on

ಸುಬ್ರಹ್ಮಣ್ಯ: ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಗುರುವಾರ ಸುಬ್ರಹ್ಮಣ್ಯ ಐನೆಕಿದು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ರೈತರ ಚಿಂತನಾ ಸಭೆ ನಡೆಯಿತು.

ವೇದಿಕೆ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ರೈತರಿಗೆ ಉಂಟಾಗುವ ತೊಂದರೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪಶ್ಚಿಮಟ್ಟ, ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಇತರ ನಿರ್ಣಯಗಳು: ರೈತರ ಸ್ವಾಧೀನದಲ್ಲಿರುವ ಮನೆ, ಕೃಷಿ ಮತ್ತಿತರರ ಎಲ್ಲಾ ಭೂಮಿಗೆ ಹಕ್ಕು ಪತ್ರ ಕೊಡಬೇಕು. ಕಾಡು ಪ್ರಾಣಿಗಳಿಂದ ಕೃಷಿಕರು, ಕೃಷಿ ಭೂಮಿ ರಕ್ಷಿಸಲು ಕೋವಿ ಪರವಾನಗಿ ನೀಡುವುದು. ರೈತರ ಮೂಲಸೌಕರ್ಯದ ಭೂಮಿ ಕಾದಿರಿಸಿದ ನಂತರ ಅರಣ್ಯ ಸಂರಕ್ಷಣೆ ಯೋಜನೆ ರೂಪಿಸುವುದು. ಪರಿಸರ ಸಂರಕ್ಷಣೆ, ಅಭಿವೃದ್ಧಿಗೆ ಅರಣ್ಯ ಇಲಾಖೆಗೆ ಬರುವ ಸರ್ಕಾರದ ಅನುದಾನವನ್ನು ಸ್ಥಳೀಯಾಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಠಾನ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಲೆನಾಡು ಜನಹಿತರಕ್ಷಣಾ ವೇದಿಕೆ ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ್ ಮೂಲೆಮಜಲು, ರಮಾನಂದ ಎಣ್ಣೆಮಜಲು, ಈಶ್ವರ ಅರಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಮಟ್ಟದ ಹಲವಾರು ರೈತರು ಭಾಗವಹಿಸಿದ್ದರು.

ಹಕ್ಕೊತ್ತಾಯ ಸಭೆ

ಜಾಗವನ್ನು ಜಂಟಿ ಸರ್ವೇ ನಡೆಸಿ ಭಾಗಶಃ ಅರಣ್ಯ ಬರುವ ಸಮಸ್ಯೆ ಬಗೆಹರಿಸಬೇಕು. ಪ್ಲಾಟಿಂಗ್ ಆಗದ ಜಾಗವನ್ನು ಪ್ಲಾಟಿಂಗ್ ಮಾಡಿಸಿ ಕೊಡಬೇಕು. ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ನವಂಬರ್ 15ರಂದು ಹಕ್ಕೊತ್ತಾಯ ಸಭೆ ನಡೆಸುವುದು, ಅಲ್ಲಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸ್ಪಂದಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net