

ಹಾಸನ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿಂದು ಜನಜಾಗೃತಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಕೋಟ್ಯಂತರ ಹಿಂದು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ಈ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಸಮಿತಿಯ ಅನಂತರಾಜು ಮಾಧ್ಯಮದವರೊಂದಿಗೆ ಮಾತನಾಡಿ, ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಕಾಳಿ, ಮಹಾಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಆರಾಧನೆ ನಡೆಯುತ್ತದೆ. ವಿಜಯದಶಮಿಯಂದು ಚಾಮುಂಡೇಶ್ವರಿ ದೇವಿ ಮಹಿಷಾಸುರನ ಸಂಹಾರ ಮಾಡಿದ ನೆನಪಿಗಾಗಿ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ದೇವಿಯ ಮೇಲಿನ ಶ್ರದ್ಧೆ ಮತ್ತು ನಾಡದೇವಿಯ ಮೇಲಿನ ಗೌರವ ಹೊಂದಿರುವವರನ್ನು ಆಹ್ವಾನಿಸಬೇಕು.
ಬಾನು ಮುಷ್ತಾಕ್ ಅವರ ಹಿಂದಿನ ಭಾಷಣಗಳಲ್ಲಿ ಭುವನೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಜತೆಗೆ ದತ್ತಪೀಠ ಹೋರಾಟದ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಪರವಾಗಿ ನಿಲುವು ತಳೆದಿರುವುದು ಭಕ್ತರಲ್ಲಿ ಅಸಮಾಧಾನ ಉಂಟು ಮಾಡಿದೆ. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಿದರು.
ವಿವಾದಾತ್ಮಕ ಅಭಿಪ್ರಾಯ ಹೊಂದಿರುವವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಸರಿಯಲ್ಲ. ಸೂಕ್ತವಾದ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ದಸರಾ ಪಾವಿತ್ರೃ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದು ಜನಜಾಗೃತಿ ಸಮಿತಿಯ ಸುಜಾತಾ, ಗೋವಿಂದರಾಜು, ಪ್ರಕಾಶ್, ವೇಧ, ಲಕ್ಷ್ಮೀ, ಪುಷ್ಪಾ, ದೇವಿಕಾ ಇತರರು ಇದ್ದರು.