ಹೊಟ್ಟೆ ಉರಿಯಿಂದ ವಿಪಕ್ಷಗಳು ಆರೋಪ ಮಾಡುತ್ತಿವೆ

23 KRN-1
Published on

ಕೆ.ಆರ್.ನಗರ: ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ಟೀಕೆ ಮಾಡುತ್ತಿದೆ. ಆದರೆ, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕೆಲಸಗಳಿಗೂ ಅನುದಾನ ನೀಡುತ್ತಿದೆ ಎಂಬುದಕ್ಕೆ ಕೆ.ಆರ್.ನಗರದಲ್ಲಿ 513 ಕೋಟಿ ರೂ.ಅಭಿವೃದ್ಧಿ ಕಾಮಗಾರಿಗಳ ಸಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ 513 ಕೋಟಿ ರೂಪಾಯಿಗಳ ಅನುದಾನದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿರೋಧ ಪಕ್ಷಗಳ ಜನಾಕ್ರೋಶ ಯಾತ್ರೆ ರಾಜಕೀಯ ಪ್ರೇರಿತವೆ ಹೊರತು ಅದು ಜನರಲಿಲ್ಲ. ಅವರು ಹೊಟ್ಟೆ ಉರಿಯಿಂದ ಹೀಗೆಲ್ಲ ಮಾಡುತ್ತಿದ್ದಾರೆ. ಅವರು 4 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ ಆದರೆ ನಾವು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಎರಡು ವರ್ಷದಲ್ಲಿ 90 ಸಾವಿರ ಕೋಟಿ ನೀಡಿದ್ದೇವೆ. ಅಲ್ಲದೆ 60 ಸಾವಿರ ಕೋಟಿ ವೃದ್ಧಾಪ್ಯ ವೇತನ, ವಿಧವಾ ವೇತನ, ರೈತರ ವಿದ್ಯುತ್ ಸಬ್ಸಿಡಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನೀಡಲಾಗಿದ್ದು ಚುನಾವಣಾ ಪೂರ್ವದಲ್ಲಿ ನಾವು ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಅಲ್ಲದೇ 30 ಕಾರ್ಯಕ್ರಮಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದೇವೆ ಎಂದು ಹೇಳಿದರು.

ಕಳೆದ ಬಾರಿ ಬಿಜೆಪಿಯವರು ಲೂಟಿ ಹೊಡೆಯುವ ಕಾರಣಕೋಸ್ಕರ 2.70 ಲಕ್ಷ ಕೋಟಿ ರೂ.ಅನುದಾನವನ್ನು ಮಂಜೂರು ಮಾಡದೆ ಕಾರ್ಯಕ್ರಮಕ್ಕೆ ಚಾಲನೆ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ನಂತರ ಅವರು ಬಿಟ್ಟು ಹೋದ ಭಾರವನ್ನೆಲ್ಲ ನಮ್ಮ ಮೈ ಮೇಲೆ ಹೊತ್ತು ಜನಪರ ಕೆಲಸ ಮಾಡಿದ್ದು ಇನ್ನೂ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಹಾಲಿನ ದರದ ಮೇಲೆ ನಾಲ್ಕು ರೂಪಾಯಿಗಳನ್ನು ಹೆಚ್ಚಳ ಮಾಡಿದ್ದು ಇದನ್ನು ರೈತರಿಗೆ ನೀಡಲಾಗುತ್ತಿದೆ. ನಮ್ಮ ಸರ್ಕಾರ ಬೆಲೆ ಹೆಚ್ಚಳ ಮಾಡುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್ ಡೀಸೆಲ್ ಗ್ಯಾಸ್ ಚಿನ್ನ ಬೆಳ್ಳಿ ರಸಗೊಬ್ಬರ ಔಷಧಿಗಳ ಬೆಲೆಯನ್ನು ದುಪ್ಪಟ್ಟು ಹೆಚ್ಚಳ ಮಾಡಿದ್ದು ಇದನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕಾಗಿದೆ ಅವರು ಮಾಡಿರುವ ತಪ್ಪುಗಳನ್ನು ನಾವು ಸರಿ ಮಾಡುತ್ತಿದ್ದೇವೆ ಇಂದು ಹೇಳಿದರು.

ರಾಜ್ಯದ ಏಳು ಕೋಟಿ ಜನರಲ್ಲಿ ಮೂರುವರೆ ಕೋಟಿ ಮಹಿಳೆಯರಿದ್ದು ಯಾವುದೇ ಧರ್ಮ ಜಾತಿ ಅಂತಸ್ತು ಇಲ್ಲದೆ ಉಚಿತವಾಗಿ ಬಸ್‌ನಲ್ಲಿ ತಿರುಗಾಡಬಹುದು ಇಲ್ಲಿಯವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಸಂಚಾರ ಮಾಡಿದ್ದು ಪ್ರತಿ ತಿಂಗಳು 60 ಲಕ್ಷದಷ್ಟು ಮಹಿಳೆಯರು ಸಂಚರಿಸುತ್ತಿದ್ದಾರೆ ಎಂದರು.

ಈ ಹಿಂದೆ ಕೆ.ಆರ್.ನಗರದಲ್ಲಿ ಅಧಿಕಾರದಲ್ಲಿ ಇದ್ದವರು ಏನೂ ಮಾಡಿಲ್ಲ ಆದರೆ ಟೀಕೆ ಮಾಡುವುದನ್ನು ಬಿಟ್ಟಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನವರು ನಮ್ಮ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಹಾಕಿದ್ದು ಅದರಲ್ಲಿ ಎಲ್ಲ ಸುಳ್ಳುಗಳೆ ತುಂಬಿವೆ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಇವರೆಲ್ಲ ಬಹಳ ದಿನದಿಂದ ರಾಜಕೀಯದಲ್ಲಿ ಇದ್ದರೂ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಇವರುಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ನನಗೆ ಕೆ ಆರ್ ನಗರ ಕ್ಷೇತ್ರ ಬಹಳ ವರ್ಷಗಳಿಂದ ಆತ್ಮೀಯವಾಗಿದ್ದು, ನಾನು ಯಾವುದೇ ಅಭ್ಯರ್ಥಿಗಳ ಪರ ಮತ ಕೇಳಿದಾಗಲೆಲ್ಲ ಇಲ್ಲಿನ ಜನ ಸ್ಪಂದಿಸಿದ್ದಾರೆ ಇಂದು 513 ಕೋಟಿ ರೂ. ಅನುದಾನ ಇಲ್ಲಿಗೆ ಶಾಸಕ ಡಿ.ರವಿಶಂಕರ್ ಕಾರಣವಾಗಿದ್ದು, ಆತ ಹೆಚ್ಚು ಮಾತನಾಡುವುದಿಲ್ಲ ಆದರೆ ಕೆಲಸ ಮಾಡಿಸುತ್ತಾನೆ ಎಂದರು.

ಇಂತಹ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿರುವ ರವಿಶಂಕರ್ ಅವರನ್ನು ಮುಂದಿನ ಬಾರಿಯೂ ಕೂಡ ಕ್ಷೇತ್ರದ ಮತದಾರರು ಗೆಲ್ಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮವನ್ನು ಕುರಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಡಿ.ರವಿಶಮಕರ್ ಮಾತನಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್, ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಸುನಿತಾರವಿಶಂಕರ್, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ರಮೇಶ್, ಜಿಲ್ಲಾ ಕಾಂಗ್ರೆಸ್ ಗ್ರಾಮಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್ ಜಾಬೀರ್, ನಗರಾಧ್ಯಕ್ಷ ರಮೇಶ್, ಎಸ್ ಟಿ ಘಟಕದ ಅಧ್ಯಕ್ಷ ತಿಪ್ಪೂರು ಮಹದೇವನಾಯಕ, ಪುರಸಭಾ ಅಧ್ಯಕ್ಷ ಡಿ.ಶಿವಕುಮಾರ್, ಉಪಾಧ್ಯಕ್ಷೆ ವಸಂತಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net