ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ : ಸಾರ್ವಜನಿಕ, ವೈಯಕ್ತಿಕ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು

Published on

ಬಂಟ್ವಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿನ ಕ್ರಿಯಾಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯಿತಿಗೆ ಇಲ್ಲವೇ ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

https://mgnrega.karnataka.gov.in/kn  ಲಿಂಕ್ ಮೂಲಕ ಬೇಡಿಕೆ ಸಲ್ಲಿಸಬಹುದು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಲಾಗಿದ್ದು, ಕಾಮಗಾರಿ ಆಯ್ಕೆ ಮಾಡಿ ಬೇಡಿಕೆ ಸಲ್ಲಿಸಲು ಅವಕಾಶವಿದೆ.

ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಡಿ ವೈಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ದನದ ಹಟ್ಟಿ ಮೇಕೆ/ಕುರಿ ಶೆಡ್, ಹಂದಿ ಶೆಡ್, ಕೋಳಿ ಶೆಡ್, ಕೊಳವೆ ಬಾವಿ ಮರುಪೂರಣ ಘಟಕ, ದ್ರವತ್ಯಾಜ್ಯ ಗುಂಡಿ, ಎರೆಹುಳು ಗೊಬ್ಬರ ಘಟಕ, ಬಯೋಗ್ಯಾಸ್, ಕೃಷಿ ಹೊಂಡ ರಚನೆ, ಗೊಬ್ಬರ ಗುಂಡಿ, ಇಂಗುಗುಂಡಿ, ಅಡಕೆ ಕೃಷಿ, ತೆಂಗು ಕೃಷಿ, ಚಿಕ್ಕು, ಕಾಳುಮೆಣಸು, ಕೊಕ್ಕೋ, ವೀಳ್ಯದೆಲೆ, ಮಾವು, ಗುಲಾಬಿ, ತಾಳೆ, ಗೇರು, ಮಲ್ಲಿಗೆ, ಅಂಗಾಂಶ ಬಾಳೆ, ಪಪ್ಪಾಯ, ನುಗ್ಗೆ ಕೃಷಿ, ರಂಬೂಟನ್, ಪೇರಳೆ, ಪೌಷ್ಟಿಕ ತೋಟ ರಚನೆ, ಬಸಿಗಾಲುವೆ(ಉಜಿರ್ ಕಣಿ) ರಚನೆ, ಡ್ರ್ಯಾಗನ್ ಫ್ರೂಟ್ ಬೆಳೆಯಲು ಇತರೆ ಕಾಮಗಾರಿಗೆ ಆರ್ಥಿಕ ಸಹಾಯಧನ ಪಡೆಯಬಹುದು. ಸಾರ್ವಜನಿಕ ಕಾಮಗಾರಿಗಳಾದ ತೋಡಿನ ಹೂಳೆತ್ತುವಿಕೆ, ಇಂಗುಗುಂಡಿ ನಿರ್ಮಾಣ, ಕಾಂಕ್ರೀಟ್ ರಸ್ತೆ ನಿರ್ಮಾಣ, ಶಾಲೆ ಆವರಣ ಗೋಡೆ, ಶಾಲಾ ಆಟದ ಮೈದಾನ, ಸಮಗ್ರ ಕೆರೆ ಅಭಿವೃದ್ಧಿ, ಶಾಲಾ ಅಡುಗೆ ಕೋಣೆ ನಿರ್ಮಾಣ, ಕಚ್ಚಾ ರಸ್ತೆ, ಸಮುದಾಯ ಸೋಕ್ಪಿಟ್ (ಅಂಗನವಾಡಿ, ಸರ್ಕಾರಿ ಶಾಲೆ, ಕಾಲೋನಿಗಳಲ್ಲಿ), ಅಂಗನವಾಡಿ, ಸರ್ಕಾರಿ ಶಾಲೆ ಆವರಣದಲ್ಲಿ ಪೌಷ್ಟಿಕ ತೋಟ ರಚನೆ ಸೇರಿ ವಿವಿಧ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು.

ಸಣ್ಣ ಮತ್ತು ಅತಿ ಸಣ್ಣ ರೈತರು ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದು. ಉದ್ಯೋಗ ಚೀಟಿ, ಬಿಪಿಎಲ್ ಕಾರ್ಡ್ ಪ್ರತಿ, ಎಪಿಎಲ್ ಆಗಿದ್ದಲ್ಲಿ ಸಣ್ಣ ರೈತ ಪ್ರಮಾಣ ಪತ್ರ, ಪ.ಜಾತಿ/ಪಂಗಡದ ಜಾತಿ ಪ್ರಮಾಣ ಪತ್ರ, ಆರ್‌ಟಿಸಿ ಪ್ರತಿ, ಹಕ್ಕುಪತ್ರ ಇದ್ದಲ್ಲಿ ಅದರ ಪ್ರತಿ ದಾಖಲೆ ಇರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net