ಚಿರತೆ ಹಿಡಿಯಲು ಕಾರ್ಯಾಚರಣೆ : ಜಾಂಬ್ರಿ ಪ್ರದೇಶದಲ್ಲಿ ಬಿಟ್ಟ ಬಗ್ಗೆ ಗ್ರಾಮಸ್ಥರ ಆಕ್ರೋಶ ಹಿನ್ನೆಲೆ

lepord
Published on

ಪುತ್ತೂರು ಗ್ರಾಮಾಂತರ: ಕೇರಳದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯೊಂದನ್ನು ತಂದು ಬಿಟ್ಟಿದ್ದಾರೆ ಎನ್ನಲಾದ ಕರ್ನಾಟಕ ಕೇರಳ ಗಡಿಪ್ರದೇಶದಲ್ಲಿ ಬರುವ ಬಂಟಾಜೆ ರಕ್ಷಿತಾರಣ್ಯ ವ್ಯಾಪ್ತಿಯ ಜಾಂಬ್ರಿ ಪರಿಸರದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿಗಳು ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆ ಹಿಡಿಯಲು ಬೋನು ಮತ್ತು 3 ಕಡೆಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಈ ತನಕ ಚಿರತೆ ಇರುವ ಯಾವುದೇ ಸುಳಿವು ಲಭಿಸಿಲ್ಲ. ಹಾಗಾಗಿ ಗ್ರಾಮಸ್ಥರನ್ನು ಆವರಿಸಿದ್ದ ಆತಂಕ ದೂರವಾಗಿಲ್ಲ.

ಕಾಸರಗೋಡು ಬೇಡಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ಅಧಿಕಾರಿಗಳು ಬಂಟಾಜೆ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಜಾಂಬ್ರಿ ಪರಿಸರದಲ್ಲಿ ಬಿಟ್ಟಿದ್ದಾರೆ ಎಂಬ ವದಂತಿ ಹಿನ್ನ್ನೆಲೆಯಲ್ಲಿ ಪಾಣಾಜೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಬೆಳವಣೆಗೆಯ ಹಿನ್ನಲೆಯಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿಗಳ ತಂಡ ಚಿರತೆಯ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜಾಂಬ್ರಿ ಪ್ರದೇಶ ಭಾಗದಲ್ಲಿ ಕಾಡುಪ್ರಾಣಿಗಳು ಹಾದು ಹೋಗುವ ದಾರಿಯನ್ನು ಗುರುತಿಸಿ ಚಿರತೆ ಹಿಡಿಯಲು ಬೋನು ಅಳವಡಿಸಿದ್ದಾರೆ. ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನೇತೃತ್ವದ ತಂಡ ಜಾಂಬ್ರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್ ಸಹಿತ 8 ಮಂದಿಯನ್ನೊಳಗೊಂಡ ತಂಡ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಅಲ್ಲಿಗೆ ಭೇಟಿಯಿತ್ತು ಗಸ್ತು ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಈ ತನಕ ಚಿರತೆಯ ಸುಳಿವು ಲಭಿಸಿಲ್ಲ.

ಪ್ರವಾಸಿಗರು ಬರುವ ಸ್ಥಳ

ಬಂಟಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಕರ್ನಾಟಕಕ್ಕೆ ಸೇರಿದ ಸ್ಪಲ್ಪ ಭಾಗವಿದ್ದು, ಕರ್ನಾಟಕ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯ ಜಾಂಬ್ರಿ ಪ್ರದೇಶದ ಸಮೀಪದ ಗಿಳಿಯಾಲು ಪರಿಸರದಲ್ಲಿ ಹಲವು ಮನೆಗಳಿವೆ. ಅಂಗನವಾಡಿ ಕೇಂದ್ರವಿದೆ. ಜಾಂಬ್ರಿ ಪ್ರದೇಶಕ್ಕೆ ಪ್ರವಾಸಿಗರು ಬರುತ್ತಿರುತ್ತಾರೆ. ಈ ಪ್ರದೇಶದಿಂದ ಕೇರಳಕ್ಕೆ ಸಂಪರ್ಕಿಸುವ ದಾರಿಯೂ ಇದ್ದು, ಈ ಭಾಗದಲ್ಲಿ ಕೇರಳದ ಅರಣ್ಯ ಇಲಾಖೆಯವರು ಬೋನಿಗೆ ಚಿರತೆಯನ್ನು ತಂದು ಬಿಟ್ಟಿದ್ದಾರೆ ಎನ್ನುವುದು ಪಾಣಾಜೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ನಾವು ಬೆಳಗ್ಗೆ ಮತ್ತು ಮುಂಜಾನೆ ಜಾಂಬ್ರಿ ಪ್ರದೇಶಕ್ಕೆ ತೆರಳಿ ಗಸ್ತು ನಡೆಸುತ್ತಿದ್ದೇವೆ. ನೀರು ಇರುವ ಪ್ರದೇಶಕ್ಕೆ ಪ್ರಾಣಿಗಳು ನೀರು ಕುಡಿಯಲು ಬರುವ ದಾರಿಯನ್ನು ಗುರುತಿಸಿ ಒಂದು ಕಡೆಯಲ್ಲಿ ಚಿರತೆ ಹಿಡಿಯಲು ಬೋನು ಅಳವಡಿಸಲಾಗಿದೆ. ಪ್ರತ್ಯೇಕ ಮೂರು ಕಡೆಗಳಲ್ಲಿ ಚಿರತೆಯ ಗುರುತಿಸುವಿಕೆಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ಈ ತನಕ ಚಿರತೆಯ ಯಾವುದೇ ಸುಳಿವು ಸಿಕ್ಕಿಲ್ಲ. ಮದನ್, ಪಾಣಾಜೆ ಉಪವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net