

ತುಮಕೂರು: ಲೋಕ ಸಮರ ಹೊಸ್ತಿಲಿನಲ್ಲಿ ತುಮಕೂರಿನಲ್ಲಿ ಸದ್ದಿಲ್ಲದೆ ಅತ್ತಿಂದಿತ್ತ ಪಕ್ಷಾಂತರಿಗಳ ‘ಜಿಗಿತ’ ಆರಂಭವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಜಿಲ್ಲೆಯ ಪ್ರವಾಸಕೈಗೊಂಡ ಬೆನ್ನಲ್ಲೇ ದಳಪತಿಗಳಿಗೆ ಶಾಕ್ ಕೊಡಲು ಕೈ ಪಡೆ ಆಪರೇಷನ್ ಹಸ್ತಕ್ಕೆ ಮುಂದಾಗಿದೆ.
ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಎಚ್.ನಿಂಗಪ್ಪ ನಿವಾಸಕ್ಕೆ ಶನಿವಾರ ದೇವೇಗೌಡರು ಭೇಟಿ ನೀಡಿ ಮಾತೃ ಪಕ್ಷಕ್ಕೆ ಮರಳುವಂತೆ ಆಹ್ವಾನ ನೀಡಿದ್ದರು. ನಿಂಗಪ್ಪ ಸೇರ್ಪಡೆಯಿಂದ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಕ್ತಿ ಬಂದಿತ್ತು. ಈ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲೇ ಕಾಂಗ್ರೆಸ್ ಈಗ ರಿವರ್ಸ್ ಆಪರೇಷನ್‌ಗೆ ಕೈಯಿಟ್ಟಿದೆ. ಸತತವಾಗಿ ಮೂರುಬಾರಿ ಸೋಲನುಭವಿಸಿದ್ದರೂ ತನ್ನದೇ ಆದ ಮತಬ್ಯಾಂಕ್ ಹೊಂದಿರುವ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್.ಗೋವಿಂದರಾಜುಗೆ ಕಾಂಗ್ರೆಸ್ ಮುಖಂಡರು ಗಾಳ ಹಾಕಿರುವುದು ಸಹಜವಾಗಿ ಬಿಜೆಪಿ-ಜೆಡಿಎಸ್ ಮುಖಂಡರ ನಿದ್ದೆಗೆಡಿಸಿದೆ.
ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಲೋಕ ಚುನಾವಣೆಯಲ್ಲಿ ‘ಕೈ’ ಹಿನ್ನಡೆ ಸಾಧ್ಯತೆ ಅರಿತ ಜಿಲ್ಲೆಯ ಹೈಕಮಾಂಡ್ ಎನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಿಂದೆಮುಂದೆ ನೋಡದೇ ಗೋವಿಂದರಾಜು ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಕೆಎನ್‌ಆರ್ ಮನೆಗೆ ಗೋವಿಂದರಾಜು: ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿವಾಸದಲ್ಲಿ ಭಾನುವಾರ ಗೋವಿಂದರಾಜು ಜತೆ ಸಚಿವ ಪರಮೇಶ್ವರ, ಕೈ ಅಭ್ಯರ್ಥಿ ಎಸ್.ಪಿ.ಮುದ್ದುಹನುಮೇಗೌಡ ಚರ್ಚೆ ನಡೆಸಿದ್ದು ಪಕ್ಷ ಸೇರ್ಪಡೆ ಆಗಿದ್ದೇ ಆದಲ್ಲಿ ಸೂಕ್ತ ಸ್ಥಾನಮಾನ ನೀಡುವ ಆಮಿಷವನ್ನು ಕಾಂಗ್ರೆಸ್ ನಾಯಕರು ಈ ಸಂದರ್ಭದಲ್ಲಿ ಒಡ್ಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ರಾಜಕೀಯ ಭವಿಷ್ಯ, ತನ್ನ ಉದ್ಯಮ ವಿಸ್ತರಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೈ ಸೇರ್ಪಡೆಗೆ ಗೋವಿಂದರಾಜು ಸಕಾರಾತ್ಮಕ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೈ ಮೂಲಗಳು ತಿಳಿಸಿವೆ.
ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ಕೊಡಿಸಿದ್ದಾಗಿನಿಂದಲು ಗೋವಿಂದರಾಜು ಜತೆ ನಿಕಟಸಂಪರ್ಕ ಹೊಂದಿರುವ ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಈ ಆಪರೇಷನ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ. ಶನಿವಾರ ಸಂಜೆಯಷ್ಟೇ ಬಿಜೆಪಿ- ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗಿಯಾಗಿದ್ದ ಬಲಿಜ ಸಮುದಾಯದ ಗೋವಿಂದರಾಜು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ದೊಡ್ಡಮಟ್ಟ ಲೀಡ್ ಕೊಡಿಸುವ ಭರವಸೆ ಕೊಟ್ಟಿದ್ದರು.
ಕಾಂಗ್ರೆಸ್‌ನ ರಿವರ್ಸ್ ಆಪರೇಷನ್ ಬಿಜೆಪಿ-ಜೆಡಿಎಸ್ ಮೈತ್ರಿ ಓಟಕ್ಕೆ ಆಘಾತ ನೀಡಿದೆ.
ಹ್ಯಾಟ್ರಿಕ್ ಸೋಲು ಜೆಡಿಎಸ್‌ನ ಎನ್.ಗೋವಿಂದರಾಜು 2013 ರಿಂದ ಸತತ ಮೂರು ಚುನಾವಣೆಯಲ್ಲಿ ಸೋಲನುಭವಿಸಿದ್ದರು ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿರುವುದು ಕಾಂಗ್ರೆಸ್‌ನತ್ತ ಸೆಳೆಯಲು ಪ್ರಮುಖ ಕಾರಣವೆನ್ನಲಾಗಿದೆ. 2013ರ ಚುನಾವಣೆಯಲ್ಲಿ 38322 ಮತಗಳಿಸಿ ಮೂರನೇ ಸ್ಥಾನ ಪಡೆದಿದ್ದ ಗೋವಿಂದರಾಜು 2018ರಲ್ಲಿ 55126 ಮತಗಳಿಸಿ 2ನೇ ಸ್ಥಾನಗಳಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಫೀಕ್ ಅಹ್ಮದ್‌ರನ್ನು 3ನೇ ಸ್ಥಾನಕ್ಕೆ ದೂಡಿದ್ದರು. 2023ರ ಚುನಾವಣೆಯಲ್ಲು ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ಗೆ ತೀವ್ರ ಪೈಪೋಟಿ ನೀಡಿದ್ದರಾದರೂ 55967 ಮತಗಳಿಸಿ ಗೋವಿಂದರಾಜು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.