ವಿಧಾನಸೌಧಕ್ಕೆ ದಿಢೀರ್​ ಆಗಮನ ಕ್ರೇನ್​-ಅಗ್ನಿಶಾಮಕ ವಾಹನ; ಅದನ್ನು ಕಂಡು ಕೆಲಕಾಲ ವಿಚಲಿತಗೊಂಡ ಸಿಬ್ಬಂದಿ!

Untitled 2
Published on

ಬೆಂಗಳೂರು: ವಿಧಾನಸೌಧಕ್ಕೆ ಇಂದು ದಿಢೀರ್ ಆಗಿ ಕರೆಸಿಕೊಳ್ಳಲಾಗಿದ್ದ ದೊಡ್ಡ ಕ್ರೇನ್​ ಹಾಗೂ ಅಗ್ನಿಶಾಮಕ ವಾಹನದಿಂದಾಗಿ ಅಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೆಲಕಾಲ ವಿಚಲಿತಗೊಂಡ ಪರಿಸ್ಥಿತಿ ಉಂಟಾಗಿತ್ತು.

ಅಗ್ನಿಶಾಮಕ ವಾಹನ ಹಾಗೂ ಕ್ರೇನ್​ ಸಮ್ಮುಖದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಕಂಡ ಹಲವರಿಗೆ ಅಲ್ಲಿ ಏನಾಗುತ್ತಿದೆ ಎಂಬುದು ಅರಿವಿಗೆ ಬರಲು ಒಂದಷ್ಟು ಸಮಯವೇ ಬೇಕಾಯಿತು. ಅಗ್ನಿಶಾಮಕ ವಾಹನದಲ್ಲಿ ಬಂದ ಸಿಬ್ಬಂದಿ ನೋಡನೋಡುತ್ತಿದ್ದಂತೆ ಅದರಲ್ಲಿನ ಏಣಿ ಏರಿ ಕಾರ್ಯಾಚರಣೆಗೆ ತೊಡಗಿದ್ದು ಅಚ್ಚರಿಗೀಡು ಮಾಡಿತ್ತು.

ಹೀಗೆ ಅಚ್ಚರಿದಾಯಕ ರೀತಿಯಲ್ಲಿ ಕೆಲಕಾಲ ನಡೆದ ಈ ಕಾರ್ಯಾಚರಣೆ ಯಾಕೆಂಬುದನ್ನು ತಿಳಿದ ಅಲ್ಲಿದ್ದವರಿಗೆ ಅಳುವುದೋ ನಗುವುದೋ ಎಂಬಂಥ ಪರಿಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಅದು ಆಪರೇಷನ್​ ಕ್ಯಾಟ್​. ಅರ್ಥಾತ್, ಅಲ್ಲಿ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿದ್ದ ಬೆಕ್ಕೊಂದನ್ನು ರಕ್ಷಿಸುವ ಕಾರ್ಯಾಚರಣೆ ಅದಾಗಿತ್ತು.

ವಿಧಾನಸೌಧದ ಎರಡನೇ ಮಹಡಿಯ ಆರ್ಚ್ ಮೇಲೆ ಸಿಕ್ಕಿ ಹಾಕಿಕೊಂಡ ಬೆಕ್ಕು ಕೆಳಗಿಳಿಯಲಾಗದೆ ಒದ್ದಾಡಿ ಕೂಗುತ್ತಿದ್ದರಿಂದ ವಿಧಾನಸೌಧದಿಂದ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿತ್ತು. ಆರ್ಚ್​ ಮೇಲಿದ್ದ ಬೆಕ್ಕನ್ನು ಹಿಡಿದು ರಕ್ಷಿಸಲು ಎರಡನೇ ಮಹಡಿಗೆ ಏಣಿ ಇಟ್ಟು ಏರಿದಾಗ ಆ ವ್ಯಕ್ತಿಯ ಕೈಗೆ ಪರಚಿ ಒದ್ದಾಡಿ ಆರ್ಚ್​ನಿಂದ ಬಿದ್ದ ಬೆಕ್ಕು ನೇರವಾಗಿ ನೆಲಕ್ಕೆ ಬಿದ್ದಿತ್ತು. ಅಲ್ಲಿದ್ದ ಹುಲ್ಲಿನ ಹಸಿರು ಹೊದಿಕೆ ಮೇಲೆ ಅದು ಬಿದ್ದಿದ್ದರಿಂದ ಅಂಥ ಅಪಾಯಕ್ಕೇನೂ ಈಡಾಗದ ಬೆಕ್ಕು ಯಾರ ಕೈಗೂ ಸಿಗದೆ ಪರಾರಿಯಾಗಿತ್ತು. ಒಟ್ಟಿನಲ್ಲಿ ಈ ಕಾರ್ಯಾಚರಣೆ ಕೆಲಕಾಲ ಕುತೂಹಲ ಹಾಗೂ ಮನರಂಜನೆ ವಿಷಯವಾಗಿ ಪರಿಣಮಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net