

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಮಣಿಪಾಲ್ ಆಸ್ಪತ್ರೆಯೊಂದಿಗೆ ಒಪ್ಪಂಧ ಮಾಡಿಕೊಂಡಿದ್ದು, ಇನ್ನು ಮುಂದೆ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ 24/7 ವೈದ್ಯಕೀಯ ಸೇವೆ ದೊರೆಯಲಿದೆ.
ದಿನದ 24 ಗಂಟೆ ಅತ್ಯಾಧುನಿಕ ಸೌಲಭ್ಯ ದೊರೆಯಲಿದ್ದು, ವೈದ್ಯರೊಂದಿಗೆ ಸಮಾಲೋಚನೆ, ಪ್ರಥಮ ಚಿಕಿತ್ಸೆ, ಎಕ್ಸೃ್ರೇ, ಅಲ್ಟ್ರಾಸೌಂಡ್ ಮತ್ತು ತುರ್ತು ಚಿಕಿತ್ಸೆ ಸೇರಿ ತ್ವರಿತ ಮತ್ತು ಪರಿಣಾಮಕಾರಿ ವೈದ್ಯಕೀಯ ಸೇವೆಗಳನ್ನು ಮಣಿಪಾಲ್ ಆಸ್ಪತ್ರೆ ಒದಗಿಸಲಿದೆ. ಚಿಕಿತ್ಸೆಯ ಜೊತೆಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಕೌಶಲ ತರಬೇತಿಯನ್ನು ಸಹ ನೀಡಲಿದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಹಠಾತ್ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಪರಿಸ್ಥಿತಿ ನಿರ್ವಹಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಪ್ರಥಮ ಚಿಕಿತ್ಸೆಯನ್ನು ಏರ್ಪೋರ್ಟ್ ಮಣಿಪಾಲ್ ಮೆಡಿಕಲ್ ಸೆಂಟರ್ನಲ್ಲಿ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಹತ್ತಿರದ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎರಡು ಆ್ಯಂಬುಲೆನ್ಸ್ಗಳು ಸದಾ ಸನ್ನದ್ಧವಾಗಿರುತ್ತವೆ.
"ವಿಮಾನ ನಿಲ್ದಾಣದ ಹೊಸ ವೈದ್ಯಕೀಯ ಕೇಂದ್ರವು ಮಣಿಪಾಲ್ ಆಸ್ಪತ್ರೆಯ ಅನುಭವಿ ವೈದ್ಯಕೀಯ ಆರೈಕೆಯಿಂದ ಪ್ರಯಾಣಿಕರ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ." - ಡಾ.ಹರಿ ಕೆ. ಮಾರಾರ್, ಕೆಐಎಎಲ್ ಎಂಡಿ
" ವೈದ್ಯಕೀಯ ತುರ್ತು ಪರಿಸ್ಥಿತಿಗಳು ಯಾರಿಗೆ, ಯಾವಾಗ ಸಂಭವಿಸಬಹುದು ಹೇಳುವುದಕ್ಕೆ ಸಾಧ್ಯವಿಲ್ಲ. ನಮ್ಮ ಅತ್ಯಾಧುನಿಕ ಸೌಲಭ್ಯವು ತುರ್ತು ಆರೈಕೆಗೆ ಸಹಕಾರಿಯಾಗಲಿದೆ." -ಡಾ.ಎಚ್.ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ