

ಜೆ.ಕೆ.ಆನಂದ್ ಚೇಳೂರು
ಚೇಳೂರು ತಾಲೂಕು ಕೇಂದ್ರ ರಚನೆಯಾಗಿ ನಾಲ್ಕು ವರ್ಷ ಕಳೆದರೂ ನಾಮಲಕ ಬದಲಾಗಿದ್ದು ಬಿಟ್ಟರೆ, ತಾಲೂಕು ಕೇಂದ್ರಕ್ಕೆ ಬೇಕಾದ ಕಚೇರಿಗಳು, ಕಟ್ಟಡ ಸೇರಿ ಮತ್ತಿತರ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿವೆ. ತಾಲೂಕು ಕಚೇರಿಗೆ ಬೇಕಾದ ಕನಿಷ್ಠ ಸವಲತ್ತು ಈವರೆಗೂ ದೊರೆತಿಲ್ಲ. ಪೂರ್ಣ ಪ್ರಮಾಣದಲ್ಲಿ ತಾಲೂಕು ಕಚೇರಿಯಾಗಿ ರೂಪುಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಬಾಯಿ ಮಾತಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು ಕೃತಿಯಲ್ಲಿ ಈವರೆಗೂ ಸ್ವಲ್ಪವೂ ಪ್ರಗತಿ ಕಂಡಿಲ್ಲ. ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಭೂಮಿ ಗುರುತಿಸಿಲ್ಲ. ಜಾಗವನ್ನೇ ಗುರುತಿಸದ ಆಡಳಿತ, ಜನರ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಪರಿಹರಿಸುತ್ತದೆ ಎಂಬುದೂ ಪ್ರಶ್ನೆಯಾಗಿದೆ.
ಗಡಿನಾಡಿನ ಜನತೆಯ ಹೋರಾಟದ ಫಲವಾಗಿ 2020ರಲ್ಲಿ ಚೇಳೂರು ತಾಲೂಕು ರಚನೆಗೆ ಗೆಜೆಟ್ ನೋಟಿಫಿಕೇಷನ್ ಆಯಿತು. ತಾಲೂಕು ರಚನೆಯಾಗಿ ನಾಲ್ಕು ವರ್ಷ ಕಳೆದರೂ ತಾಲೂಕು ಕಚೇರಿಗೊಂದು ನೆಲೆ ಸಿಕ್ಕಿಲ್ಲ. ತಾಲೂಕು ಕಚೇರಿ ನಾಮಲಕದಲ್ಲಿ ನಾಡಕಚೇರಿ ಕೆಲಸ ನಡೆಯುತ್ತಿದೆಯೇ ಹೊರತು ಯಾವುದೇ ಕೆಲಸವಾಗಲೀ, ಸೌಲಭ್ಯಗಳಾಗಲೀ ರೈತರಿಗೆ ದೊರಕುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಬಾಡಿಗೆ ಕಟ್ಟಡದಲ್ಲಿ ಕಚೇರಿ
ಕಳೆದ ವರ್ಷ ಚೇಳೂರು ಹೊರವಲಯದ ಗೆರಿಗಿರೆಡ್ಡಿಪಾಳ್ಯದಲ್ಲಿ ಬಾಡಿಗೆ ಕಟ್ಟಡದಲ್ಲಿ ತಾಲೂಕು ಕಚೇರಿ ಆರಂಭಗೊಂಡಿತು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಹಾಗೂ ಶಾಸಕರು ಜಿದ್ದಾಜಿದ್ದಿನ ಪೈಪೋಟಿಗೆ ಬಿದ್ದು ಖಾಸಗಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತಾಲೂಕು ಕಚೇರಿ ಉದ್ಘಾಟಿಸಿದರು. ಆದರೆ, ವರ್ಷ ಕಳೆದರೂ ನೂತನ ತಾಲೂಕಿಗೆ ಬೇಕಾದ ಯಾವುದೇ ಕಚೇರಿ ಕಾರ್ಯಾರಂಭ ಮಾಡಿಲ್ಲ. ಈ ಅವಧಿಯಲ್ಲಿ ಬದಲಾಗಿದ್ದು ನಾಡಕಚೇರಿಯಿಂದ ತಾಲೂಕು ಕಚೇರಿ ಎಂಬ ನಾಮಫಲಕ ಮಾತ್ರ.
ತಹಸೀಲ್ದಾರ್ ಬಿಟ್ಟರೆ ಯಾರೂ ಇಲ್ಲ
ಕಚೇರಿಯಲ್ಲಿ ತಹಸೀಲ್ದಾರ್ ಬಿಟ್ಟರೆ ಬೇರೆ ಯಾರೂ ಇಲ್ಲ. ಇಬ್ಬರು ಗ್ರೇಡ್-2 ತಹಸೀಲ್ದಾರ್, ಇಬ್ಬರು ಶಿರಸ್ತೇದಾರರು, ಮೂವರು ಪ್ರಥಮ ದರ್ಜೆ ಸಹಾಯಕರು, ಒಬ್ಬರು ಆಹಾರ ನಿರೀಕ್ಷಕರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು, ಒಬ್ಬರು ಡೇಟಾ ಎಂಟ್ರಿ ಆಪರೇಟರ್, ಮೂವರು ಗ್ರೂಪ್ ಡಿ ದರ್ಜೆ ಸಹಾಯಕರು ಸೇರಿ ಒಟ್ಟು 17 ಸಿಬ್ಬಂದಿ ನೇಮಕವಾಗಬೇಕಿದೆ.
ವಿವಿಧ ಇಲಾಖೆ ಸೇವೆಗಳು ಆರಂಭವಾಗಿಲ್ಲ
ಲೋಕಸಭೆ ಚುನಾವಣೆ ವೇಳೆ ಚೇಳೂರು ತಾಲೂಕಿನಲ್ಲಿ ಅಗತ್ಯ ಎಲ್ಲ ಕಚೇರಿಗಳನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಭರವಸೆ ನೀಡಿ ಹೋದ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡಿಲ್ಲ. ತಹಸೀಲ್ದಾರ್ ಬಿಟ್ಟು ನಾಡಕಚೇರಿ ಸಿಬ್ಬಂದಿ ಹಾಗೂ ಕೆಲ ತಾತ್ಕಾಲಿಕ ಸಿಬ್ಬಂದಿ ಹೊರತುಪಡಿಸಿದರೆ, ಯಾವುದೇ ಸಿಬ್ಬಂದಿ ನಿಯೋಜನೆಯಾಗಿಲ್ಲ. ಕೋಣೆಗಳಲ್ಲಿ ಪೀಠೋಪಕರಣ ಅಳವಡಿಕೆ, ವಿದ್ಯುತ್ ಸಂಪರ್ಕ ಕಾರ್ಯವೂ ಮಂದಗತಿಯಲ್ಲಿ ಸಾಗಿದೆ. ತಹಸೀಲ್ದಾರ್ ಕಚೇರಿ ಶೀಘ್ರ ಆರಂಭವಾದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಬಾಗೇಪಲ್ಲಿ ತಾಲೂಕು ಕೇಂದ್ರಕ್ಕೆ ಅಲೆದಾಡುವ ಅಗತ್ಯ ಇರುವುದಿಲ್ಲ ಎಂದು ಜನ ಭಾವಿಸಿದ್ದರು. ಆದರೆ, ನಿರೀಕ್ಷೆ ಆ ಹುಸಿಯಾಗಿದೆ. ಈಗಿರುವ ಕಚೇರಿ ಆಧಾರ್ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸುವುದಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಗಿಮಿಕ್
ಹೊಸ ತಾಲೂಕು ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ, ಪಕ್ಷದ ಕಾರ್ಯಕ್ರಮದಂತೆ ಆಚರಿಸಿದ್ದರು. ಆದರೆ, ಈಗ ನಾಲ್ಕು ವರ್ಷ ಕಳೆಯುತ್ತಾ ಬಂದರೂ, ಯಾವುದೇ ಕಚೇರಿ ಆರಂಭ ಗೊಂಡಿಲ್ಲ. ಇದೆಲ್ಲ ಚುನಾವಣಾ ಗಿಮಿಕ್ ಎಂಬುದು ನಾಗರಿಕರ ಆರೋಪ.
ಚೇಳೂರು ಸುತ್ತಮುತ್ತಲಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಇದ್ದರೂ, ಇದುವರೆಗೂ ತಾಲೂಕು ಕಚೇರಿ ನಿರ್ಮಾಣಕ್ಕೆ ಸ್ಥಳ ಗುರುತಿಸಿಲ್ಲ. ಇದೆಲ್ಲವನ್ನು ಗಮನಿಸಿದರೆ ಸರ್ಕಾರ ಏನು ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಆದಷ್ಟು ಶೀಘ್ರದಲ್ಲಿ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಕಾಮಗಾರಿ ಆರಂಭಿಸಬೇಕಿದೆ.
- ಬಿ.ಎಸ್.ಭಾನುಪ್ರಕಾಶ್ ಗುಪ್ತ, ಅಧ್ಯಕ್ಷರು, ವರ್ತಕರ ಸಂಘ, ಚೇಳೂರು
ತಾಲೂಕು ಕೇಂದ್ರವಾಗಿರುವ ಚೇಳೂರಿನಲ್ಲಿ ಆದಷ್ಟು ಶೀಘ್ರದಲ್ಲಿ ಕಚೇರಿ ನಿರ್ಮಾಣಕ್ಕೆ ಬೇಕಾದ ಸ್ಥಳವನ್ನು ಗುರುತಿಸಿ ಅಭಿವೃದ್ಧಿಗೆ ಗಮನಹರಿಸಬೇಕು.
- ಬಿ.ಈಶ್ವರರೆಡ್ಡಿ, ಕವಿ, ದರವಾರಪಲ್ಲಿ, ಚೇಳೂರು
ಚೇಳೂರು ತಾಲೂಕು ನೂತನ ಕಚೇರಿ ನಿರ್ಮಾಣಕ್ಕೆ ಯಾವುದೇ ಜಾಗ ಗುರುತಿಸಿಲ್ಲ. ಗುರುತಿಸಿರುವ ಜಾಗ ಹಳ್ಳಿ ಪಂಚಾಯಿತಿ ಾರೆಸ್ಟ್ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸ್ಥಳ ಗುರುತಿಸುವ ಕಾರ್ಯಕ್ಕೆ ಮುಂದಾಗಿಲ್ಲ.
- ಶ್ರೀನಿವಾಸಲು ನಾಯ್ಡು, ತಹಸೀಲ್ದಾರ್ ಚೇಳೂರು ತಾಲೂಕು