ಕರಾವಳಿ ಜಿಲ್ಲೆಯಲ್ಲಿ ಮಾತ್ರ 5 ದಿನ ಮಳೆ: ಉಳಿದೆಡೆ ಸಾಧಾರಣ

rain (3)
Published on

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂದಿನ 5 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ.1ರಿಂದ ಸೆ.2ರವರೆಗೆ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅಲ್ಲದೆ, ಈ ಮೇಲಿನ ಜಿಲ್ಲೆಗಳಲ್ಲಿ ಸೆ.3ರಿಂದ ಮುಂದಿನ 2 ದಿನ ಇನ್ನಷ್ಟು ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಕೊಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಸೆ.3ರಂದು ಯೆಲ್ಲೋ ಅಲರ್ಟ್ ಇರಲಿದೆ.

ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ರಾಯಚೂರು,ಕೊಪ್ಪಳ, ಹಾವೇರಿ, ಧಾರವಾಡ ಮತ್ತು ಗದಗದಲ್ಲಿ ಮುಂದಿನ 5 ದಿನ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ. ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ, ಉತ್ತರದಲ್ಲಿ ಕುಂಠಿತ: ಆ.25ರಿಂದ ಆ.31ರವರೆಗೆ ಕರಾವಳಿ,ಮಲೆನಾಡಲ್ಲಿ ವಾಡಿಕೆಗಿಂತ ಅಧಿಕವಾಗಿ ಬಿದ್ದಿದ್ದರೂ ದಕ್ಷಿಣ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆ ಅಭಾವವಾಗಿತ್ತು. ಇದೀಗ, ಮಾನ್ಸೂನ್ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿ ಇನ್ನಷ್ಟು ಮಳೆ ಕೊರತೆ ಎದುರಾಗುವ ಆತಂಕ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net