ಆದಾಯ ಸೋರಿಕೆ ತಡೆಗೆ ಆನ್​ಲೈನ್ ಪರಿಶೀಲನೆ: ದಸ್ತಾವೇಜುಗಳ ನೋಂದಣಿಪೂರ್ವ ಸ್ವಯಂಚಾಲಿತ ಆಡಿಟ್ ಪದ್ಧತಿ

Printing
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದ ಖಜಾನೆ ತುಂಬಿಸುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ರಾಜಸ್ವ ಸೋರಿಕೆ ತಪ್ಪಿಸಲು ಕಂದಾಯ ಇಲಾಖೆ ಮಾಸ್ಟರ್ ಪ್ಲಾ್ಯನ್ ಮಾಡಿದೆ. ಕಾವೇರಿ 2.0 ತಂತ್ರಾಂಶದಲ್ಲಿ ‘ದಸ್ತಾವೇಜುಗಳ ನೋಂದಣಿಪೂರ್ವ ಸ್ವಯಂಚಾಲಿತ ಪರಿಶೀಲನೆ’ ಪದ್ಧತಿಯನ್ನು ಅಳವಡಿಸಲಾಗಿದ್ದು, ಫೆ.1ರಿಂದ 256 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಗೆ ಬರಲಿದೆ.

ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರತಿವರ್ಷ ಅಂದಾಜು 24 ಲಕ್ಷ ದಸ್ತಾವೇಜುಗಳು ನೋಂದಣಿ ಆಗುತ್ತಿದ್ದು, 18 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಇದರ ಮಧ್ಯೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಸೋರಿಕೆ ಆಗುತ್ತಿರುವ ಬಗ್ಗೆ ಮಹಾಲೇಖಪಾಲರ ವರದಿಯಲ್ಲಿ (ಸಿಎಜಿ) ಉಲ್ಲೇಖವಾಗುತ್ತಿದೆ. ಇದನ್ನು ತಡೆಗಟ್ಟಲು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ದಸ್ತಾವೇಜುಗಳನ್ನು ನೋಂದಣಿಗೆ ಮುನ್ನ ಸ್ವಯಂಚಾಲಿತವಾಗಿ ಪರಿಶೀಲನೆ ಅಥವಾ ಆಡಿಟ್ ನಡೆಸುವ ಪದ್ಧತಿ ಜಾರಿಗೊಳಿಸಲು ತೀರ್ವನಿಸಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಸುಧಾರಿತ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಾಯದಿಂದ ಹೊಸ ಆಡಿಟ್ ಪದ್ಧತಿಯನ್ನು ಜನವರಿ ಅಂತ್ಯದ ವೇಳೆಗೆ ಅಳವಡಿಸಿ ಫೆ.1ರಿಂದ ಎಲ್ಲ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾರಿಗೆ ತರಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದ್ದಾರೆ. ಮೊದಲನೇ ಪುಟದಿಂದ...

ಪಕ್ಷಗಾರರು ಕಾವೇರಿ 2.0 ತಂತ್ರಾಂಶದಲ್ಲಿ ನೋಂದಣಿಗೆ ದಸ್ತಾವೇಜುಗಳನ್ನು ಅಪ್​ಲೋಡ್ ಮಾಡಿದ ಬಳಿಕ ಸಬ್​ರಿಜಿಸ್ಟ್ರಾರ್​ಗಳು ದಾಖಲೆ ಪರಿಶೀಲನೆ ನಡೆಸಿ ಶುಲ್ಕ ವಿಧಿಸುತ್ತಿದ್ದರು. ಶುಲ್ಕ ಪಾವತಿಸಿದ ಮೇಲೆ ಮತ್ತೆ ಸಬ್ ರಿಜಿಸ್ಟ್ರಾರ್​ಗಳು ಶುಲ್ಕ ಸ್ವೀಕೃತಿ ದೃಢಿಕರಿಸಿ ನೋಂದಣಿ ಪ್ರಕ್ರಿಯೆ ಮುಗಿಸುತ್ತಿದ್ದರು. ಹೊಸ ಪದ್ಧತಿ ಪ್ರಕಾರ ದಸ್ತಾವೇಜುಗಳು ಅಪ್​ಲೋಡ್ ಆಗಿ ಸಬ್​ರಿಜಿಸ್ಟ್ರಾರ್​ಗಳು ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ವಿಧಿಸಿದ ಮೇಲೆ ಸ್ವಯಂಚಾಲಿತವಾಗಿ ಆ ದಸ್ತಾವೇಜುಗಳು ಆನ್​ಲೈನ್​ನಲ್ಲಿ ರಾಜ್ಯದ ಬೇರೆ ಸಬ್ ರಿಜಿಸ್ಟ್ರಾರ್​ಗಳ ಖಾತೆಗೆ ರವಾನೆ ಆಗಲಿವೆ.

ಆ ಅಧಿಕಾರಿ, ರಾಜಸ್ವ ವಿಧಿಸಿರುವುದು ಸರಿ ಇದೆಯೇ ಎಂದು ಪರಿಶೀಲನೆ ನಡೆಸಿ ವ್ಯತ್ಯಾಸಗಳಿದ್ದರೆ ಸರಿಪಡಿಸಿ ಆನ್​ಲೈನ್​ನಲ್ಲಿ ಕಳುಹಿಸಲಿದ್ದಾರೆ. ಕಚೇರಿ ಕೆಲಸದ ಅವಧಿ 24 ಗಂಟೆ ಒಳಗಾಗಿ ಆಡಿಟ್ ಮುಗಿಸಬೇಕು. ಇಲ್ಲವಾದಲ್ಲಿ ಸ್ವಯಂಚಾಲಿತವಾಗಿ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಗೆ ರವಾನೆಯಾಗಲಿವೆ. ಆ ಬಳಿಕವಷ್ಟೇ ಸಬ್​ರಿಜಿಸ್ಟ್ರಾರ್​ಗಳು ಶುಲ್ಕ ಪಾವತಿಗೆ ಅನುಮತಿ ನೀಡಲಿದ್ದಾರೆ. ಈ ಎಲ್ಲದರ ನಡುವೆಯೂ ಶುಲ್ಕ ಸಂಗ್ರಹದಲ್ಲಿ ಸೋರಿಕೆ ಅಥವಾ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡುವ ಅಧಿಕಾರ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ (ಐಜಿಆರ್) ಇರಲಿದೆ.

15 ನೋಂದಣಿಗೂ ಅನ್ವಯ

ಹತ್ತು ಕೋಟಿ ರೂ. ಮೇಲ್ಪಟ್ಟ ಶುದ್ಧ ಕ್ರಯಪತ್ರ, ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ), ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಮಾರ್ಟ್​ಗೇಜ್, ಬೋಗ್ಯ, ಶುದ್ಧ ಕ್ರಯ ರದ್ಧತಿಪತ್ರ, ಕಂಪನಿ ನೋಂದಣಿ, ಟ್ರಸ್ಟ್ ನೋಂದಣಿ, ವರ್ಗಾವಣೆ ಪತ್ರ, ವಿಭಾಗ ಪತ್ರಗಳ ನೋಂದಣಿಗೂ ಅನ್ವಯ ಆಗಲಿದೆ. ಈ ಬಗ್ಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೆಚ್ಚಾದ ಕೆಲಸದೊತ್ತಡ, ನೋಂದಣಿ ವಿಳಂಬ

ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶಕ್ಕೆ ಅಪ್​ಡೇಟ್ ಮಾಡಿದ ದಿನದಿಂದ ಹೆಚ್ಚಿನ ಜವಾಬ್ದಾರಿ ಉಪ ನೋಂದಣಾಧಿಕಾರಿಗಳ ಮೇಲೆ ಬೀಳುತ್ತಿದೆ. ಇದಕ್ಕೆ ಜವಾಬ್ದಾರಿ ವಿಂಗಡಣೆ ಆಗದೆ ಇರುವುದು ಮುಖ್ಯವಾಗಿದೆ. ಇಸಿ, ಸಿಸಿ, ನೋಂದಣಿ ಸೇರಿ ಪ್ರತಿಯೊಂದಕ್ಕೂ ಆನ್​ಲೈನ್​ನಲ್ಲಿ ಸಬ್​ರಿಜಿಸ್ಟ್ರಾರ್​ಗಳೇ ದೃಢೀಕರಿಸಿ ಅನುಮೋದನೆ ನೀಡಬೇಕಾಗಿದೆ. ಇದೀಗ ಸ್ವಯಂಚಾಲಿತ ಆಡಿಟ್ ಪದ್ಧತಿ ಶುರುವಾದರೆ ಮತ್ತೊಂದು ಹೊಸ ಕೆಲಸ ಶುರುವಾಗಲಿದೆ. ಜತೆಗೆ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ಸಹ ವಿಳಂಬ ಆಗಲಿದೆ. ರಾಜ್ಯದ ಬೇರೆ ಬೇರೆ ಕಚೇರಿಯ ದಸ್ತಾವೇಜು ಬಂದಾಗ ಅದನ್ನು ಆಡಿಟ್ ಮಾಡಿ ಕಳುಹಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದರಿಂದಾಗಿ ಸಬ್​ರಿಜಿಸ್ಟ್ರಾರ್​ಗಳ ಮೇಲೆ ಕೆಲಸದೊತ್ತಡ ಹೆಚ್ಚಾಗುವುದು ಸಹಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net