ಆನ್‌ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಅಧಿಕ

27 HRS 01
Published on

ಹಿರೀಸಾವೆ: ಪರವಾನಗಿ ಹಾಗೂ ವಿಮೆ ಇಲ್ಲದ ವಾಹನ ಚಾಲನೆ ಅಪರಾಧವಾಗಿದ್ದು ಕಾನೂನಿನಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಎಸ್‌ಐ ನವೀನ್‌ಕುಮಾರ್ ಹೇಳಿದರು.


ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ ಹಿರೀಸಾವೆ ಪ್ರಥಮ ದರ್ಜೆ ಕಾಲೇಜು ವತಿಯಿಂದ ಎನ್‌ಎಸ್‌ಎಸ್ ಶಿಬಿರದಡಿ ಭಾನುವಾರ ಹಮ್ಮಿಕೊಂಡಿದ್ದ ಅಪರಾಧ ತಡೆಯುವಲ್ಲಿ ಯುವ ಜನತೆ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರವಾನಗಿ ಹಾಗೂ ವಿಮೆ ಹೊಂದಿಲ್ಲದಿದ್ದರೆ ಅಪಘಾತ ನಡೆದ ಸಮಯದಲ್ಲಿ ಕಠಿಣ ಕಾನೂನು ಎದುರಿಸಬೇಕಾಗುತ್ತದೆ. ಅದಕ್ಕೂ ಮೊದಲು ನಿಮ್ಮ ಜೀವ ಹಾಗೂ ಜೀವನದ ಸಂರಕ್ಷಣೆ ಅಗತ್ಯವಿರುತ್ತದೆ. ಆದ್ದರಿಂದ ಸಕಾಲದಲ್ಲಿ ಪರವಾನಗಿ ಮಾಡಿಸಿಕೊಳ್ಳುವುದರ ಜತೆಗೆ ವಿಮೆ ಪಾವತಿಸುವುದು ಸೂಕ್ತ ಎಂದು ಸಲಹೆ ನೀಡಿದರು.


ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಪಾಲಕರು ನೀಡುತ್ತಿದ್ದು ಇದರಿಂದ ದೊಡ್ಡ ಅನಾಹುತಗಳಿಗೆ ಕಾರಣರಾಗುತ್ತಿದ್ದಾರೆ. ಜತೆಗೆ ಸಾಕಷ್ಟು ಮಂದಿ ದ್ವಿಚಕ್ರ ವಾಹನ ಚಾಲನೆ ವೇಳೆ ಮೊಬೈಲ್‌ಗಳಲ್ಲಿ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದು ಅಪಘಾತಕ್ಕೆ ಆಹ್ವಾನ ನೀಡಿದಂತೆಯೇ ಸರಿ ಎಂದು ಎಚ್ಚರಿಸಿದರು.


ಆನ್‌ಲೈನ್ ವ್ಯವಹಾರದಲ್ಲಿ ದಿನದಿಂದ ದಿನಕ್ಕೆ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಅವಸರದಿಂದ ಅಥವಾ ಮಾಹಿತಿ ಅರಿಯದೆ ಅಪರಿಚಿತರಿಗೆ ಬ್ಯಾಂಕ್ ಖಾತೆಯ ಮಾಹಿತಿ ನೀಡುತ್ತಿದ್ದು ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಸಾಕಷ್ಟು ಜವಾಬ್ದಾರಿ ಮತ್ತು ಎಚ್ಚರಿಕೆ ವಹಿಸಬೇಕು ಎಂದರು.


ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಕೆ.ಸುಧಾಕರ್, ರೇಣುಕಾ ಸೋಮಶೇಖರ್, ಶಿಬಿರಾಧಿಕಾರಿ ಕುಮಾರ್, ಸಹಾಯಕ ಶಿಬಿರಾಧಿಕಾರಿ ಆಶಾ ಹಾಗೂ ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net