ಸಿಮೆಂಟ್ ಪೂರೈಕೆ ಹೆಸರಲ್ಲಿ ಆನ್ ಲೈನ್ ವಂಚನೆ

cyber crime
Published on

ರಾಮನಗರ: ಆನ್‌ಲೈನ್ ವಂಚನೆಗೆ ಈಗ ನಾನಾ ಮುಖಗಳು. ಅವಕಾಶ ಸಿಕ್ಕಲೆಲ್ಲಾ ವಂಚಕರು ಅಮಾಯಕರ ಖಾತೆಗೆ ಖನ್ನ ಹಾಕುವ ಕೆಲಸ ಮಾಡುತ್ತಲೇ ಇರುತ್ತಾರೆ.

ಚನ್ನಪಟ್ಟಣದ ವ್ಯಕ್ತಿಯೊಬ್ಬರು ಸಿಮೆಂಟ್ ಖರೀದಿ ಮಾಡಲು ಹೋಗಿ ಆನ್‌ಲೈನ್ ವಂಚನೆಗೆ ಒಳಗಾಗಿರುವ ಪ್ರಕರಣವೊಂದು ಸೆನ್ ಠಾಣೆಯಲ್ಲಿ ದಾಖಲಾಗಿದೆ.

ಚನ್ನಪಟ್ಟಣ ತಾಲೂಕು ಅಕ್ಕೂರು ಗ್ರಾಮದ ಕಿರಣ್ ಎಂಬುವರು ತಮ್ಮ ಗ್ರಾಮದಲ್ಲಿ ಸಿಮೆಂಟ್ ವ್ಯಾಪಾರ ಮಾಡಿಕೊಂಡಿದ್ದು, ವ್ಯಾಪಾರಕ್ಕಾಗಿ ಅಂಬುಜಾ ಸಿಮೆಂಟ್ ತರಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಫೋನ್ ನಂಬರ್‌ಗಳನ್ನು ಹುಡುಕಿದ್ದಾರೆ. ಇಲ್ಲಿ ಸಿಕ್ಕಿ ನಂಬರ್‌ಗೆ ಕರೆ ಮಾಡಿದಾಗ, ಅಂಬುಜಾ ಸಿಮೆಂಟ್ ಕಂಪನಿಯ ಮ್ಯಾನೇಜರ್ ನಿಮಗೆ ಕರೆ ಮಾಡುತ್ತಾರೆ ಎಂದು ಕರೆ ಕಡಿತಗೊಳಿಸಿದ್ದಾರೆ.

ಇದಾದ ಕೆಲವೇ ಹೊತ್ತಿಗೆ ಮತ್ತೊಂದು ನಂಬರ್‌ನಿಂದ ಕಿರಣ್ ಅವರ ಮೊಬೈಲ್ ಕರೆ ಮಾಡಿದ ವ್ಯಕ್ತಿ, ತಾನು ಕಂಪನಿಯ ಮ್ಯಾನೇಜರ್ ಎಂದು ಹೇಳಿ ಪರಿಚಯ ಮಾಡಿಕೊಂಡು, 5.40 ಲಕ್ಷ ರೂ ನ ಕೊಟೇಷನ್ ಕೊಟ್ಟಿದ್ದಾರೆ.

ಅಲ್ಲದೆ, ಇದರಲ್ಲಿ 2 ಲಕ್ಷ ರೂ ಹಣವನ್ನು ಮುಂಗಡವಾಗಿ ಕಟ್ಟಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನು ನಂಬಿದ ಕಿರಣ್ ತಮ್ಮ ಬ್ಯಾಂಕ್ ಖಾತೆಯಿಂದ ಸೆ.25ರಂದು ಹಣವನ್ನು ಅವರ ನೀಡಿದ್ದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದಾದ ಕೆಲ ಹೊತ್ತಿಗೆ ಮತ್ತೆ ಕರೆ ಮಾಡಿದ ವಂಚಕರು ಪೂರ್ತಿ ಹಣ ಪಾವತಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಇದರಿಂದ ಅನುಮಾನಗೊಂಡ ಕಿರಣ್, ಕಂಪನಿಯ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ಕರ್ನಾಟಕಕ್ಕೆ ಅಂಬುಜಾ ಸಿಮೆಂಟ್ ಪೂರೈಕೆ ಮಾಡುತ್ತಿಲ್ಲ ಎನ್ನುವುದು ತಿಳಿದು ಬಂದಿದೆ. ನಂತರ ತಾವು ಮೋಸ ಹೋಗಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net