ಧೂಮಪಾನಿಗಳ ಆಸೆ ಈಡೇರಿಸಲು ಆನ್​ಲೈನ್ ವಹಿವಾಟು ಆರಂಭಿಸಿದವರೀಗ ಅಂದರ್​..

online cigerret sales two arrested 24 APR 20
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಅವಧಿಯಲ್ಲಿ ಗುಟ್ಖಾ ಸಿಗರೇಟ್ ಮಾರಾಟ ನಿಷೇಧಿಸಲ್ಪಟ್ಟಿದೆ. ಆದಾಗ್ಯೂ ಅನೇಕರು ಗುಟ್ಖಾ, ಸಿಗರೇಟ್​ಗಾಗಿ ಒದ್ದಾಡುತ್ತಿರುವುದನ್ನು ಮನಗಂಡ ಇಬ್ಬರು ಆನ್​ಲೈನ್ ವಹಿವಾಟು ಶುರುಮಾಡಿದ್ರು. ಮೂನ್​ಲೈಟ್ ಡೆಲಿವರೀಸ್ ಎಂಬ ಹೆಸರನ್ನೂ ಇಟ್ಟುಕೊಂಡ್ರು. ಅಗತ್ಯವಸ್ತುಗಳ ಮಾದರಿಯಲ್ಲೇ ಗ್ರಾಹಕರಿದ್ದಲ್ಲಿಗೇ ಹೋಗಿ ಡೆಲಿವರಿ ಕೊಡಲಾರಂಭಿಸಿದರು. ಆರಂಭದಲ್ಲಿ ಎಲ್ಲವೂ ಸರಿಯಾಗೇ ಇತ್ತು.

ಮೂನ್​ಲೈಟ್ ಡೆಲಿವರೀಸ್ ಹೆಸರಿನಲ್ಲಿ ಪೋಸ್ಟ್​ಗಳನ್ನು ಮಾಡುತ್ತಿದ್ದರು. ಯಾರು ಬೇಡಿಕೆ ಇರಿಸುತ್ತಾರೋ ಅಲ್ಲಿಗೆ ಹೋಗಿ ಡೆಲಿವರಿ ಕೊಡುತ್ತಿದ್ದರು. ಇವರ ಬಳಿ ದೇಶಿ ಹಾಗೂ ವಿದೇಶಿ ಸಿಗರೇಟ್​, ಗುಟ್ಖಾಗಳಿದ್ದವು. ಇವರ ಈ ವಹಿವಾಟಿನ ಸುಳಿವು ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಅವರು ಈ ಅತಿರೇಕದ ಸ್ಟಾರ್ಟಪ್​ಗೆ ಬೀಗ ಹಾಕಲು ಪ್ಲ್ಯಾನ್ ರೂಪಿಸಿಕೊಂಡರು.

ಅದರಂತೆ, ಕಸ್ತೂರ್ಬಾ ರಸ್ತೆಯ ಗಣೇಶನ ದೇವಸ್ಥಾನದ ಬಳಿಗೆ ಸಿಗರೇಟ್ ಡೆಲಿವರಿ ಮಾಡಲು ಹೋಂಡಾ ಸಿಟಿ ಕಾರಿನಲ್ಲಿ ಬಂದ ಇವರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ರಿಚ್​ಮಂಡ್ ಟೌನ್ ಅಗಾ ಅಬ್ದುಲ್ಲಾ ಸ್ಟ್ರೀಟ್​ನ ಅಖ್ತರ್ ಮಿರ್ಜಾ ಬಿನ್ ಸಲೀಂ ಮಿರ್ಜಾ(28) ಮತ್ತು ಶಾಂತಿನಗರದ ಬರ್ಲಿನ್​ ಸ್ಟ್ರೀಟ್​ನ ತಸುಬುದ್ದೀನ್ ಮೊಯಿದ್ದೀನ್ ಬಿನ್​ ಗೊಲ್​ ಬುಸೇನ್ ಮೊಯಿದ್ದೀನ್​(32) ಎಂದು ಗುರುತಿಸಲಾಗಿದೆ. ಇವರಿಂದ ಒಂದು ಹೊಂಡಾ ಸಿಟಿ ಕಾರು ಸೇರಿ 3 ಲಕ್ಷ ಬೆಲೆಬಾಳುವ ದೇಶಿ ಹಾಗೂ ವಿದೇಶಿ ಸಿಗರೇಟ್ ಗುಟ್ಖಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net