

ಬೆಂಗಳೂರು: ಕಳೆದೊಂದು ತಿಂಗಳ ಹಿಂದೆ ಕೆ.ಜಿ.ಗೆ 70 ರೂ. ಇದ್ದ ಈರುಳ್ಳಿ ಹಾಗೂ 500 ರೂ. ತಲುಪಿದ್ದ ಬೆಳ್ಳುಳ್ಳಿ ದರ ಈಗ ಕ್ರಮವಾಗಿ 40 ರೂ. ಹಾಗೂ 350 ರೂ.ಗೆ ಇಳಿಕೆಯಾಗಿದೆ.
ನಿಗದಿತ ಸಮಯಕ್ಕೆ ಮಳೆ ಕೈಕೊಟ್ಟು, ನಂತರದಲ್ಲಿ ಮಳೆ ಆದರೂ ಈರುಳ್ಳಿ ಇಳುವರಿ ಕುಸಿದಿತ್ತು. ಜೊತೆಗೆ ಗುಣಮಟ್ಟವೂ ಉತ್ತಮವಾಗಿಲ್ಲದ ಕಾರಣ ಬೇಡಿಕೆಯೊಂದಿಗೆ ಬೆಲೆ ಹೆಚ್ಚಳವಾಗಿತ್ತು. ಇದೀಗ ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಹೊಸ ಬೆಳೆ ಬಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿರುವುದರಿಂದ ದರ ಇಳಿಕೆಯಾಗಿದೆ. ಯಶವಂತಪುರ ಎಪಿಎಂಸಿಗೆ ನಿತ್ಯ 230 ಟ್ರಕ್‌ಗಳಲ್ಲಿ 48 ಸಾವಿರ ಚೀಲ ಈರುಳ್ಳಿ ಆಗಮಿಸಿದೆ. ಗುಣಮಟ್ಟದ ಈರುಳ್ಳಿ ಕೆಜಿಗೆ 30-40 ರೂ. ಇದೆ. ಜನವರಿ ನಂತರ ಬೆಲೆಗಳು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಯಶವಂತಪುರ ಎಪಿಎಂಸಿಯ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್.
ಕರ್ನಾಟಕದಲ್ಲೂ ಬೆಳಗಾವಿ, ಗದಗ, ಹುಬ್ಬಳ್ಳಿ, ಧಾರವಾಡ, ಬಿಜಾಪುರ, ರಾಯಚೂರು, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಇದಲ್ಲದೆ, ದೇಶದ ಹಲವು ರಾಜ್ಯಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಇದರಿಂದ ಸ್ಥಳೀಯವಾಗಿ ಈರುಳ್ಳಿ ಲಭ್ಯವಾಗುತ್ತಿರುವುದರಿಂದ ಬೆಲೆ ಇಳಿಕೆಯಾಗಲಿದೆ ಎಂದು ತಿಳಿಸಿದರು.
ಬೆಳ್ಳುಳ್ಳಿ ಬೆಲೆಯೂ ಇಳಿಕೆ:
ನಗರದ ಎಪಿಎಂಸಿ ಮಾರುಕಟ್ಟೆಗೆ ರಾಜಸ್ತಾನ, ಮಧ್ಯಪ್ರದೇಶ ಸೇರಿ ಇತರೆ ಭಾಗಗಳಿಂದ ನಿತ್ಯ 2500 ಚೀಲ ಬೆಳ್ಳುಳ್ಳಿ ಆಗಮಿಸುತ್ತಿದ್ದು, ಇದರಿಂದಾಗಿ ಒಂದು ವಾರದಿಂದ ಕೆ.ಜಿ.ಗೆ 100 ರೂ.ನಿಂದ 300 ರೂ.ಗೆ ಇಳಿಕೆಯಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಲ್ಲಿಂದ ಬೆಳ್ಳುಳ್ಳಿ ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಿಗೂ ರ‌್ತಾಗುತ್ತದೆ ಎಂದು ಯಶವಂತಪುರ ಎಪಿಎಂಸಿಯ ಬೆಳ್ಳುಳ್ಳಿ ಮಾರಾಟ ವರ್ತಕರ ಸಂಘದ ಪದಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಈರುಳ್ಳಿ ದರ (ಕೆ.ಜಿ.ಗಳಲ್ಲಿ):
ಚಿಲ್ಲರೆ ಮಾರುಕಟ್ಟೆಯಲ್ಲಿ 30-40 ರೂ.
ಹಾಪ್‌ಕಾಮ್ಸ್ 50 ರೂ.
ಎಪಿಎಂಸಿ ಸಗಟು ದರ 30-40 ರೂ.