

ಉಡುಪಿ: ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಿರುವವರ ಸಂಖ್ಯೆ ಆತಂಕ ಮೂಡಿಸುವಂತಿದೆ. ಇಂದು ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.
ಮಾಲೆ ಧರಿಸಿ ಯಾತ್ರೆಗೆ ಹೋಗಿದ್ದ ವ್ಯಕ್ತಿಯೊಬ್ಬರು ಶಬರಿಮಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರದ ಸುರೇಶ್ ಬಂಗೇರ (52) ಎಂಬವರು ಸಾವಿಗೀಡಾದ ವ್ಯಕ್ತಿ.
ಇವರು ಮಾಲೆ ಧರಿಸಿ ವ್ರತದಲ್ಲಿದ್ದು ಉದ್ಯಾವರ ಅಯ್ಯಪ್ಪಸ್ವಾಮಿ ಮಂದಿರದಿಂದ ಶಬರಿ ಮಲೆಗೆ ಹೊರಟಿದ್ದರು. ಇವರೊಂದಿಗೆ ಒಟ್ಟು 32 ಮಂದಿ ಶಬರಿಗೆ ತೆರಳಿದ್ದರು. ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ರೈಲು ಮುಖಾಂತರ ಹೊರಟಿದ್ದ, ಇವರು ಶಬರಿ ಮಲೆಯಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ.
ಉದ್ಯಾವರ ಸಂಪಿಗೆ ನಗರ ನಿವಾಸಿಯಾಗಿರುವ ಇವರು ರಿಕ್ಷಾ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರು ಇಬ್ಬರು ಹೆಣ್ಣುಮಕ್ಕಳ ತಂದೆ.