ವ್ಹೀಲಿಂಗ್ ಮಾಡಲಿಕ್ಕೆಂದೇ ಬೈಕ್​ ಕದಿಯುತ್ತಿದ್ದಾತನ ಬಂಧನ; ಹತ್ತು ದ್ವಿಚಕ್ರವಾಹನಗಳ ವಶ

Bike
Published on

ಬೆಂಗಳೂರು: ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆಮಾತಿದೆ. ಆದರೆ ಇಲ್ಲೊಬ್ಬನ ಪಾಲಿಗೆ ಯಾರದ್ದೋ ಬೈಕ್ ಇವಂದು ವ್ಹೀಲಿಂಗ್ ಎಂಬಂತಾಗಿದೆ. ವ್ಹೀಲಿಂಗ್ ಮಾಡಲೆಂದೇ ಬೈಕ್​ಗಳನ್ನು ಕಳವು ಮಾಡುತ್ತಿದ್ದ ಆರ್​ಎಕ್ಸ್​ ಸೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಹತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ವ್ಹೀಲಿಂಗ್ ಮಾಡುವ ಸಲುವಾಗಿ ಕಳವು ಮಾಡುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಜೋಗಮನಸಹಳ್ಳಿ ಗ್ರಾಮದ ಕೆ. ಸೂರ್ಯ ಅಲಿಯಾಸ್ ಆರ್‌ಎಕ್ಸ್ ಸೂರಿ (22) ಬಂಧಿತ. ಆರೋಪಿಯಿಂದ 6 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಅನ್ನಪೂಣೇಶ್ವರಿನಗರ ವ್ಯಾಪ್ತಿಯಲ್ಲಿ ಸೂರಜ್ ಎಂಬುವವರು ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಡ್ರಗ್ಸ್ ಸೇವನೆಯ ಚಟಕ್ಕೆ ಬಿದ್ದಿದ್ದು, ವೀಲ್ಹಿಂಗ್ ಚಾಳಿ ಮೈಗೂಡಿಸಿಕೊಂಡಿದ್ದಾನೆ.

ಡ್ರಗ್ಸ್ ನಶೆಯಲ್ಲಿ ನಗರದ ವಿವಿಧೆಡೆ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡಿ ನಗರದ ಹೊರವಲಯದಲ್ಲಿ ವೀಲ್ಹಿಂಗ್ ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಸ್ನೇಹಿತರಿಗೆ ಓಡಿಸಲು ನೀಡುತ್ತಿದ್ದ. ಅಲ್ಲದೇ ನಿರ್ಜನ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿ ಪರಾರಿಯಾಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಬಂಧನದಿಂದ ಅನ್ನಪೂರ್ಣೇಶ್ವರಿನಗರ 3 ಹಾಗೂ ಗಿರಿನಗರದ 1 ಸೇರಿ ಒಟ್ಟು ನಾಲ್ಕು ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ. ಉಳಿದ ಆರು ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net