ನಿವೃತ್ತನಾಗಿದ್ರೂ ಲಂಚಕ್ಕಾಗಿ ಹೊರಗುತ್ತಿಗೆ ನೌಕರನಾಗಿ ಬಂದ; ಕಡೆಗೂ ಸಿಕ್ಕಿಬಿದ್ದ...

ACB
Published on

ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಬಂದ ರೈತನಿಂದ 1,500 ರೂ. ಲಂಚ ವಸೂಲಿ ಮಾಡುತ್ತಿದ್ದ ಹೊರಗುತ್ತಿಗೆ ನೌಕರ, ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾನೆ.

ಕೆಂಗೇರಿ ಉಪನಗರದ ನಿವಾಸಿ ಲಿಂಗಯ್ಯ ಬಂಧಿತ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನೌಕರನಾಗಿ ಕರ್ತವ್ಯ ನಿರ್ವಹಿಸಿದ್ದ ಲಿಂಗಯ್ಯ, ಪ್ರತಿ ವರ್ಷ ರೈತರು ರಾಗಿ ತಂದಾಗ ಗುಣಮಟ್ಟ ಸರಿ ಇಲ್ಲವೆಂದು ಒಂದಿಲ್ಲೊಂದು ಕೊಂಕು ತೆಗೆದು 1 ಸಾವಿರದಿಂದ 5 ಸಾವಿರ ರೂ. ವರೆಗೂ ವಸೂಲಿ ಮಾಡುತ್ತಿದ್ದ.

ಇದರ ಬಗ್ಗೆ ರೈತರು ಪ್ರಶ್ನೆ ಮಾಡಲು ಸಾಧ್ಯವಾಗದೆ ಅನಿವಾರ್ಯವಾಗಿ ಲಂಚ ಕೊಟ್ಟು ರಾಗಿ ಮಾರಾಟ ಮಾಡುತ್ತಿದ್ದರು. ಈತ ಕೆಲ ತಿಂಗಳ ಹಿಂದೆಯಷ್ಟೇ ನಿವೃತ್ತಿ ಹೊಂದಿದ್ದ. ಆದರೂ ಲಿಂಗಯ್ಯ ತನ್ನ ಪ್ರಭಾವ ಬಳಸಿ ಹೊರಗುತ್ತಿಗೆ ನೌಕರನಾಗಿ ಮತ್ತೆ ಅದೇ ಜಾಗಕ್ಕೆ ಬಂದಿದ್ದರು.

ಈ ಬಾರಿಯೂ 2021-22ನೇ ಸಾಲಿನಲ್ಲಿ ನಿಗಮ ವತಿಯಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜನವರಿಯಲ್ಲಿ ರಾಗಿ ಮಾರಾಟಕ್ಕೆ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಅದರಂತೆ ನಿಗದಿತ ದಿನದಂದು ಜ್ಞಾನಭಾರತಿ ಸಮೀಪದ ನಾಗದೇವನಹಳ್ಳಿ ರಾಗಿ ಕೇಂದ್ರಕ್ಕೆ ರಾಗಿ ತಂದು ಅನ್‌ಲೋಡ್ ಮಾಡಿ ಹೋಗುತ್ತಿದ್ದರು.

ಆದರೆ, ಲಿಂಗಯ್ಯ ತನ್ನ ಚಾಳಿ ಬಿಟ್ಟಿರಲಿಲ್ಲ. ನೊಂದ ತಾವರೆಕೆರೆ ಹೋಬಳಿ ಅರಳಿಮರಪಾಳ್ಯದ ರೈತ, ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ರೈತನಿಂದ ರಾಗಿ ಖರೀದಿಸಲು 1,500 ರೂ. ಲಂಚ ವಸೂಲಿ ಮಾಡುತ್ತಿದ್ದಾಗ ಲಿಂಗಯ್ಯನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net