

ಮಂಗಳೂರು: ಕಳ್ಳತನದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದು ಕರೆತಂದಿದ್ದ ಆರೋಪಿಗಳ ಪೈಕಿ ಒಬ್ಬ ಸಾವಿಗೀಡಾಗಿದ್ದಾನೆ. ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಉರ್ವಾ ನಿವಾಸಿ ರಾಜೇಶ್ (30) ಸಾವಿಗೀಡಾದ ಆರೋಪಿ. ಇಂದು ಬೆಳಗಿನ ಜಾವ ನಗರದ ಜ್ಯೋತಿ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳು ಕದ್ದೊಯ್ಯುತ್ತಿದ್ದ ಆರೋಪದ ಮೇಲೇ ರಾಜೇಶ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿ, ಠಾಣೆಗೆ ಕರೆತಂದಿದ್ದರು.
ಸಂಜೆ ವೇಳೆಗೆ ಎದೆನೋವು ಎಂದ ಆರೋಪಿ ರಾಜೇಶ್ನನ್ನು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ರಾಜೇಶ್ ಮೃತಪಟ್ಟಿದ್ದಾಗಿ ಘೋಷಿಸಿದರು. ಜಿಲ್ಲಾಸ್ಪತ್ರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದ್ದರು.
ಇದನ್ನೂ ಓದಿ: ಮೈಲಾರಲಿಂಗೇಶ್ವರ ಕಾರ್ಣಿಕ ವಾಣಿ; ಏನು ಈ ಸಲದ ಭವಿಷ್ಯ?
ಆಸ್ಪತ್ರೆ ವೈದ್ಯರು, ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದ ಆಯುಕ್ತರು, ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ಮಾಡಲಾಗುತ್ತದೆ. ಠಾಣೆಯಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಎಲ್ಲಾ ದಾಖಲೆಗಳು ಲಭ್ಯವಿರುತ್ತವೆ. ಜೈಲಿನ ಮುಂಭಾಗದಲ್ಲೂ ಸಿಸಿಟಿವಿ ಕ್ಯಾಮರಾ ಇದೆ. ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ. ಪೋಸ್ಟ್ ಮಾರ್ಟಂ ವರದಿ ಬಳಿಕ ಚರ್ಚಿಸಲಾಗುವುದು. ನಮ್ಮ ತನಿಖೆಯ ಬಳಿಕ ಸಿಐಡಿಯಿಂದ ಪ್ರಕರಣದ ಕುರಿತು ತನಿಖೆ ನಡೆಯುತ್ತದೆ ಎಂದು ಆಯಕ್ತರು ಹೇಳಿದ್ದಾರೆ.