

ಹಾಸನ: ಹಾಸನ ತಾಲೂಕಿನ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ತಾಯಿಯ ಹೆಸರಲ್ಲಿ ‘ಒಂದು ವೃಕ್ಷ’ ಅಭಿಯಾನದಲ್ಲಿ ಸಸಿ ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣದ ಮಹತ್ವವನ್ನು ಸಾರಿದರು.
ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕಬ್ಬಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವ್ಯಾ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಗಿಡಗಳು ತಾಯಿಗೆ ಸಮಾನವಾಗಿದ್ದು, ಅವುಗಳ ಪಾಲನೆ ಹಾಗೂ ಪೋಷಣೆಯ ಮೇಲೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಇದೆ. ಇಂದು ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆ ಅಕ್ಕ ಪಕ್ಕ ಸಸಿಗಳನ್ನು ನೆಟ್ಟು, ಪೋಷಿಸಬೇಕು. ಇದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇಂದು ನಾವು ನೆಡುವ ಚಿಕ್ಕ ಸಸಿ ನಾಳೆ ಹೆಮ್ಮರವಾಗಿ ಬೆಳೆದು ನಮಗೆಲ್ಲ ಆಮ್ಲಜನಕದ ಜತೆಗೆ ಉತ್ತಮ ಆರೋಗ್ಯ ನೀಡುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಮಂಜಯ್ಯ, ಕಾರ್ಯದರ್ಶಿ ಪಲ್ಲವಿ, ಕೃಷಿ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲಾ ಮಕ್ಕಳು ಉಪಸ್ಥಿತರಿದ್ದು, ಎಲ್ಲರೂ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.