ಆದಾಯ ಸೋರಿಕೆ ತಡೆದ ಒನ್​ ಸ್ಟೇಟ್​ ಒನ್​ ಜಿಪಿಎಸ್​!

Mines
Published on

ಬೆಂಗಳೂರು: ಅಕ್ರಮ ಖನಿಜ ಸಾಗಣೆ, ಆದಾಯ ಸೋರಿಕೆ ತಡೆಗೆ ಸರ್ಕಾರ ಆರಂಭಿಸಿರುವ "ಒನ್​ ಸ್ಟೇಟ್​-ಒನ್​ ಜಿಪಿಎಸ್​' (ಒಎಸ್​ಒಜಿ) ಯೋಜನೆ ಯಶಸ್ವಿಯಾಗಿದ್ದು, ಖಜಾನೆ ಲಾಭ ಹೆಚ್ಚಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ಲಾರಿಗಳಿಂದ ಬರೋಬ್ಬರಿ 4.32 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

2022ರ ನ.5ರಂದು ಯೋಜನೆಗೆ ಅನುಮೋದನೆ ಸಿಕ್ಕಿತ್ತು. 2023ರ ಜೂನ್​ನಿಂದ ಎಲ್ಲ ಮಾದರಿಯ ಖನಿಜ, ಉಪ ಖನಿಜ ಸಾಗಿಸುವ ಲಾರಿಗಳಿಗೆ ಜಿಪಿಎಸ್​ (ಗ್ಲೋಬಲ್​ ಪೊಸಿಷನಿಂಗ್​ ಸಿಸ್ಟಂ) ಅಳವಡಿಸುವ ಕಾರ್ಯ ಶುರುವಾಗಿದೆ. ಈವರೆಗೆ 53,722 ಲಾರಿಗಳು ನೋಂದಣಿಯಾಗಿವೆ. ರಾಜ್ಯದಲ್ಲಿ ಅಂದಾಜು 2 ಲಕ್ಷ ವಾಹನಗಳಿದ್ದು, ಬಳ್ಳಾರಿಯಲ್ಲಿ ಅತಿ ಹೆಚ್ಚು ಅಂದರೆ 16,526 ಲಾರಿಗಳು ನೋಂದಣಿಯಾಗಿವೆ. ಗಣಿ ಗುತ್ತಿಗೆದಾರರು ಮತ್ತು ಲಾರಿ ಮಾಲೀಕರು ಶಾಮೀಲಾಗಿ ಒಂದು ಟ್ರಿಪ್​ಗೆ ಪರವಾನಗಿ ಪಡೆದು ಹತ್ತಾರು ಟ್ರಿಪ್​ ಹೊಡೆಯುತ್ತಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಮರಳು ಸಾಗಣೆ ಮಾಡಬೇಕಿದ್ದರೆ,ಲಾರಿ ಮಾಲೀಕರು ಚಾಮರಾಜನಗರಕ್ಕೆ ಪರ್ಮಿಟ್​ ತೋರಿಸುತ್ತಿದ್ದರು. ಈ ಅವಧಿಯಲ್ಲಿ ನಾಲ್ಕೈದು ಟ್ರಿಪ್​ಗಳನ್ನು ಬೇರೆ ಬೇರೆ ಸ್ಥಳಗಳಿಗೆ ಸಾಗಣೆ ಮಾಡುತ್ತಿದ್ದರು. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಖೋತಾ ಆಗುತ್ತಿತ್ತು. ಈಗ ಜಿಪಿಎಸ್​ ತಂತ್ರಜ್ಞಾನ ಅಳವಡಿಕೆ ನಂತರ ಅಕ್ರಮ ನಿಂತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾರಿಗಳ ಮೇಲೆ ನಿಗಾ ಹೇಗೆ?

- ಅದಿರು ಸಾಗಿಸುವ ಲಾರಿಗಳ ಚಲನವಲನದ ಮೇಲೆ ಕಂಟ್ರೋಲ್​ ರೂಂನಿಂದ ನಿಗಾ

-ಕೆಲ ಜಿಲ್ಲೆಗಳಲ್ಲಿ 100-150 ಕಿ.ಮೀ.ವ್ಯಾಪ್ತಿಯೊಳಗೆ ಭೌಗೋಳಿಕ ಪರಿಧಿ ನಿಗದಿಪಡಿಸಲಾಗಿದೆ

-ಲಾರಿಗಳು ಎಲ್ಲಿ ಲೋಡ್​ ಆಗುತ್ತೆ, ಎಲ್ಲಿ ಅನ್​ಲೋಡ್​ ಯಾವ್ಯಾವ ಜಿಲ್ಲೆಗಳಿಗೆ ಸಂಚಾರ ಮಾಹಿತಿ

- ಮೊದಲಿನಂತೆ ಒಂದು ಪರ್ಮಿಟ್​ ಪಡೆದು ಹತ್ತಾರು ಕಡೆಗಳಲ್ಲಿ ಸಾಗಣೆ ಮಾಡುವುದಕ್ಕೆ ಆಗಲ್ಲ

- ಲೋಡ್​ ತುಂಬಿದ ಲಾರಿ ಒಂದು ಗಂಟೆಗೆ 15 ಕಿ.ಮೀ ಮಾತ್ರ ಕ್ರಮಿಸಬೇಕು. ವೇಗದ ಚಾಲನೆಗೂ ಬ್ರೇಕ್​

- ಒಂದು ಬಾರಿ ಜಿಪಿಎಸ್​ ಅಳವಡಿಕೆಗೆ 500 ರೂ. ಶುಲ್ಕ ಇರಲಿದೆ

-ಲಾರಿ ಮಾಲೀಕರು ಪ್ರತಿ ವರ್ಷ ನಿರ್ವಹಣೆ ಶುಲ್ಕ ಪಾವತಿಸಿ ನವೀಕರಣ ಮಾಡಿಕೊಳ್ಳಬೇಕು

- ಅಕ್ರಮವಾಗಿ 2-3 ಬಾರಿ ಸಾಗಣೆ ಮಾಡಿದ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭ

ಕಂಟ್ರೋಲ್​ ರೂಂನಲ್ಲಿ ಕಣ್ಗಾವಲು: ಲಾರಿಗಳಿಗೆ ಜಿಪಿಎಸ್​ ಅಳವಡಿಸಲು ರಾಜ್ಯಮಟ್ಟದಲ್ಲಿ ಕಂಟ್ರೋಲ್​ರೂಂ ತೆರೆಯಲಾಗಿದೆ. ಜಿಪಿಎಸ್​ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ದಿನದ 24 ಗಂಟೆ ಕಂಟ್ರೋಲ್​ ರೂಂನಲ್ಲಿ ಸಿಬ್ಬಂದಿ ಗಮನಿಸುತ್ತಿರುತ್ತಾರೆ. ಪ್ರತಿ ತಿಂಗಳು ಎಷ್ಟು ಲಾರಿಗಳು ಚಲಿಸಿವೆ ಎಂಬುದು ಸೇರಿ ಇತರೆ ಮಾಹಿತಿ ಇಲಾಖೆಗೆ ಸಿಗಲಿದೆ. ಒಂದು ವೇಳೆ ಲಾರಿಗಳಲ್ಲಿ ಜಿಪಿಎಸ್​ ತೆಗೆದರೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net