

ಚಾಮರಾಜನಗರ: ಮಗುವಿಗೆ ಸೌತೇಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಸಹೋದರಿಯನ್ನು ಕೊಲೆ (Murder) ಮಾಡಿ ತಂದೆ ಹಾಗೂ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.
ಮೃತರನ್ನು ಐಮನ್ ಬಾನು (23) ಎಂದು ಗುರುತಿಸಲಾಗಿದ್ದು, ಪೊಲೀಸರು ಫರ್ಮನ್ ಪಾಷನನ್ನು ಬಂಧಿಸಿದ್ದು, ಗಾಯಾಳುಗಳನ್ನು ತಸ್ಲಿಮ್ ತಾಜ್, ಸೈಯದ್ ಪಾಷ ಎಂದು ತಿಳಿದು ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಜನವರಿ 01ರ ರಾತ್ರಿ ಊಟ ಮಾಡುವ ವೇಳೆ ಫರ್ಮನ್ ಪಾಷಾ ತನ್ನ ಅಣ್ಣನ ಮಗುವಿಗೆ ಸೌತೇಕಾಯಿ ತಿನ್ನಿಸಲು ಮುಂದಾಗಿದ್ದಾನೆ. ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಸೌತೇಕಾಯಿ ತಿನ್ನಿಸದಂತೆ ಅವರ ಅತ್ತಿಗೆ ತಸ್ಲಿಮ್ ತಾಜ್ ಸೂಚಿಸಿದ್ದು, ಈ ವೇಳೆ ಸಂತ್ರಸ್ತೆ ಐಮನ್ ಬಾನು ತನ್ನ ಸಹೋದರನಿಗೆ ಹಾಗೆ ಮಾಡದಂತೆ ಬೈದಿದ್ದಾಳೆ.
ತಂಗಿಯ ಮಾತಿನಿಂದ ಕೆರಳಿದ ಆರೋಪಿಯು ಹಲ್ಲೆ ಮಾಡಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದಿದ್ದಾನೆ. ಬಿಡಿಸಲು ಹೋದವರ ಮೇಲೂ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ನೆರೆಹೊರೆಯವರು ರಕ್ಷಣೆಗೆ ಧಾವಿಸುತ್ತಿದ್ದಂತೆ ಆರೋಪಿ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಶವಾಗಾರದ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.