

ವಿಜಯವಾಣಿ ಸುದ್ದಿಜಾಲ ಹಾವೇರಿ
ಜಿಲ್ಲೆಗೆ ಮುಂಬೈನ ಕಂಟಕ ಮುಂದುವರೆದಿದ್ದು, ಮಂಗಳವಾರ ಯುವತಿಯೋರ್ವಳಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ.
ಮುಂಬೈನಿಂದ ತನ್ನ ತಂದೆಯೊಂದಿಗೆ ಜಿಲ್ಲೆಗೆ ಬಂದು ಶಿಗ್ಗಾಂವಿ ತಾಲೂಕು ಜಕ್ಕಿನಕಟ್ಟಿಯಲ್ಲಿನ ರಾಣಿ ಚನ್ನಮ್ಮ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಉಳಿದಿದ್ದ ಶಿಗ್ಗಾಂವಿ ಪಟ್ಟಣದ 24 ವರ್ಷದ ಯುವತಿಗೆ ಪಿ- 3730 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಯುವತಿಯು ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾಗಿದ್ದು, ಮುಂಬೈನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಈಕೆ ತಂದೆ-ತಾಯಿಯೊಂದಿಗೆ ಮುಂಬೈನಿಂದ ಜಿಲ್ಲೆಗೆ ಬಂದಿದ್ದರು. ಮೇ 31ರಂದು ಯುವತಿಯ ತಂದೆಗೆ ಪಿ-3271 ಸೋಂಕು ದೃಢಪಟ್ಟಿತ್ತು.
ಟ್ರಾವೆಲ್ ಹಿಸ್ಟರಿ…: ಮುಂಬೈನ ಸಿದ್ದಿವಿನಾಯಕ ಚಾಳ ಸಾಂತಾಕ್ರೂಸ್ನಲ್ಲಿ ತಂದೆ-ತಾಯಿಯೊಂದಿಗೆ ಪಿ-3730ವಾಸವಾಗಿದ್ದು, ಅಂಧೇರಿಯ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಓಲಾ ಕಂಪನಿಯ ಕಾರನ್ನು ಬಾಡಿಗೆಗೆ ಪಡೆದು ಮೇ 19ರಂದು ಮುಂಬೈನಿಂದ ಹೊರಟು ಪುಣೆ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ಪೋಸ್ಟ್ಗೆ ಅಂದು ರಾತ್ರಿ 9.30ಕ್ಕೆ ಆಗಮಿಸಿದ್ದರು. ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟಿಯ ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಜೂನ್ 2ರಂದು ಪಾಸಿಟಿವ್ ವರದಿ ಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಜಕ್ಕಿನಕಟ್ಟಿ ರಾಣಿ ಚನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಜಕ್ಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಶಿಗ್ಗಾಂವಿ ತಾಲೂಕಾ ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 16 ಪಾಸಿಟಿವ್ ದಾಖಲಾಗಿದ್ದು, ಅದರಲ್ಲಿ 6ಜನ ಗುಣವಾಗಿದ್ದಾರೆ. 10 ಸಕ್ರಿಯ ಪ್ರಕರಣಗಳಿವೆ.