

ಬೆಂಗಳೂರು: ಡಾರ್ಕ್ ನೆಟ್‌ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತ ಅಂತಾರಾಷ್ಟ್ರೀಯ ಕುಖ್ಯಾತ ಹ್ಯಾಕರ್
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(25) ವಿರುದ್ಧ ಸಿಸಿಬಿ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ನ.4ರಂದು ಚಾಮರಾಜಪೇಟೆ ಅಂಚೆ ಕಚೇರಿಗೆ ವಿದೇಶದಿಂದ ಪಾರ್ಸೆಲ್‌ನಲ್ಲಿ ಡ್ರಗ್ಸ್ ತರಿಸಿದ್ದ ಪ್ರಕರಣದಲ್ಲಿ ಮಾಜಿ ಸಚಿವ ರುದ್ರಪ್ಪ ಲಂಬಾಣಿ ಪುತ್ರ ದರ್ಶನ್ ಮತ್ತು ಹೇಮಂತ್ ಮುದ್ದಪ್ಪ, ಸೋದರ ಸಂಬಂಧಿಗಳಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ ಸೇರಿ 7 ಆರೋಪಿಗಳು ಸೆರೆಸಿಕ್ಕರು. ಹ್ಯಾಕರ್ ಶ್ರೀಕೃಷ್ಣ ಸಹ ಸಿಸಿಬಿ ಪೊಲೀಸರಿಗೆ ಸೆರೆಸಿಕ್ಕಿದ್ದ. ಈ ಪ್ರಕರಣದ ತನಿಖೆ ವೇಳೆ ಶ್ರೀಕಿ ಮತ್ತಷ್ಟು ವೆಬ್‌ಸೈಟ್, ಆ್ಯಪ್, ಆನ್‌ಲೈನ್ ಗೇಮ್‌ಗಳನ್ನು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಕಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ 13 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಜಯನಗರದ ಶ್ರೀಕಿ, ಪಿಯುಸಿ ಮುಗಿಸಿ 2014ರಿಂದ 2017ವರೆಗೆ ನೆದರ್‌ಲ್ಯಾಂಡ್‌ನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಬೆಂಗಳೂರಿಗೆ ಹಿಂದಿರುಗಿದ್ದ. ಕಂಪ್ಯೂಟರ್, ಇಂಟರ್‌ನೆಟ್ ಬಳಕೆ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ನಿಪುಣನಾಗಿದ್ದಾನೆ. ಮೊದಲ ಬಾರಿಗೆ ರನ್‌ಸ್ಕೈಪ್ ಎಂಬ ಆನ್‌ಲೈನ್ ಗೇಮ್ ಹ್ಯಾಕ್ ಮಾಡಿದ್ದ. ಆನಂತರ ಇಂಡಿಯನ್ ಪೋಕರ್ ವೆಬ್‌ಸೈಟ್, ಆನ್‌ಲೈನ್ ಬಿಟ್‌ಕಾಯಿನ್ ಮತ್ತು ಇತರೆ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬೆದರಿಕೆ ಒಡ್ಡಿ ಸುಲಿಗೆ ಮಾಡುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದ.
2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಿಐಡಿ ಸೈಬರ್ ಕ್ರೈಂ ವಿಭಾಗ ತನಿಖೆ ಕೈಗೊಂಡಿದೆ. 2019ರಲ್ಲಿ ಶ್ರೀಕೃಷ್ಣ ಮುಖಾಂತರ ವಿವಿಧ ಆನ್‌ಲೈನ್ ಗ್ಯಾಂಬ್ಲಿಂಗ್ ವೆಬ್‌ಸೈಟ್ಸ್ ಹ್ಯಾಕ್ ಮಾಡಿಸಿ ಆಟಗಾರರ ಕಾರ್ಡ್ ನೋಡಿಕೊಂಡು ಮಾಹಿತಿ ಸೋರಿಕೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಆನ್‌ಲೈನ್ ಗೇಮ್‌ಗಳ ಡೇಟಾಗಳನ್ನು ಹ್ಯಾಕ್ ಮಾಡಿ ಡೇಟಾ ಸ್ಥಗಿತಗೊಳಿಸಿ ನಂತರ ಮಾಲೀಕರಿಗೆ ಕರೆ ಮಾಡಿ ಸುಲಿಗೆ ಮಾಡುತ್ತಿದ್ದ. ಆನ್‌ಲೈನ್‌ನಲ್ಲಿ ಬಿಟ್ ಕಾಯಿನ್‌ಗಳ ವರ್ಗಾವಣೆ ಹ್ಯಾಕ್ ಮಾಡಿ ಬಿಟ್‌ಕಾಯಿನ್‌ಗಳನ್ನು ಕದಿಯುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.