

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜಧಾನಿಯ ಹಲವೆಡೆ ಶುಕ್ರವಾರವೂ ಪೂರ್ವ ಮುಂಗಾರು ಸುರಿಯಿತು.
ಶಿವಾನಂದ ವೃತ್ತದಲ್ಲಿ ಬುಡ ಸಮೇತ ಮರ ಬಿದ್ದು ಕಾರು ಜಖಂಗೊಂಡಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಮರದಡಿ ಸಿಲುಕಿದ್ದ ಓರ್ವ ವ್ಯಕ್ತಿಯನ್ನು ಸ್ಥಳಿಯರು ರಕ್ಷಿಸಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ. ಬೆಳಂದೂರು 14, ಎಚ್ಎಎಲ್ ವಿಮಾನ ನಿಲ್ದಾಣ 13, ಮಾರತ್ತಹಳ್ಳಿ 11 ಮಿಮೀ ಮಳೆ ಸುರಿದಿತ್ತು.
ಬೆಳಗ್ಗೆಯಿಂದ ಬಿಸಿಲು ವಾತಾವರಣ ಕಾಣಿಸಿಕೊಂಡಿತ್ತು. ಮಧ್ಯಾಹ್ನ ವೇಳೆ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಸುರಿಯಿತು. ಕೆಲ ಜಂಕ್ಷನ್, ಅಂಡರ್ಪಾಸ್ಗಳು ತುಸು ನೀರು ನಿಂತಿತ್ತು. ಇದರ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದ್ದವು. ಸವಾರರು ಮಳೆಯಲ್ಲಿ ನೆನೆದುಕೊಂಡು ತೆರಳುತ್ತಿದ್ದರು.ನೀರು ತುಂಬಿದ ರಸ್ತೆ ಗುಂಡಿಗಳಲ್ಲಿ ಸಂಚರಿಸಿದರು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.ವಿದ್ಯಾರಣ್ಯಪುರ, ಹೊರಮಾವು, ವಿ.ನಾಗೇನಹಳ್ಳಿ, ಬಸವನಪುರ, ಗುರುಡಚಾರಪಾಳ್ಯ, ಬೀಳಕಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ, ಬಿಟಿಎಂ ಲೇಔಟ್, ಕೆ.ಆರ್.ಪುರ,ಮೈಸೂರು ರಸ್ತೆ, ಬಸವನಗುಡಿ, ಆರ್.ಟಿ. ನಗರ, ಸಹಕಾರ ನಗರ, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರ, ಯಶವಂತಪುರ ಮತ್ತು ಮೈಸೂರು ರಸ್ತೆ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು.
4 ದಿನ ಮಳೆ: ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆ ಮೇ 20ರವರೆಗೆ ಮುಂದುವರಿಯಲಿದೆ. ಕೆಲವೆಡೆ ಬಿರುಗಾಳಿ ಸಹಿತ ಜೋರು ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31 ಮತ್ತು 19 ಡಿ.ಸೆ. ಇರಲಿದೆ.