

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ- ಸಕಲೇಶಪುರ ರಾಜ್ಯ ಹೆದ್ದಾರಿಯ ಶಾಂತಪುರ ಸೇತುವೆ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಸಾರಿಗೆ ಬಸ್ ಮತ್ತು ಕಾರು ನಡುವಿನ ಅಪಘಾತದಲ್ಲಿ ಕಾರಿನಲ್ಲಿದ್ದ ಒಬ್ಬರು ಸಾವಿಗೀಡಾಗಿದ್ದಾರೆ. ಉಳಿದಂತೆ ಬಾಲಕಿ ಸೇರಿ 5 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಗನೂರು ಗ್ರಾಮದ ರಂಗೇಗೌಡ (80) ಮೃತಪಟ್ಟವರು. ಇವರ ಪುತ್ರ ರಾಜಶೇಖರ್, ಸಂಬಂಧಿಯಾದ ಕಾರು ಚಾಲಕ ಮಹೇಂದ್ರ ದಂಪತಿ, ಪುತ್ರಿ 10 ವರ್ಷದ ಮಾನ್ವಿತಾ ಹಾಗೂ ಮತ್ತೊಬ್ಬ ಮಹಿಳೆ ಅಪಘಾತದಲ್ಲಿ ಗಾಯಗೊಂಡಿದ್ದು, ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಮಹೇಂದ್ರ ಹಾಗೂ ಪುತ್ರಿ ಮಾನ್ವಿತಾ ಅವರ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರಿನಿಂದ ಮಡಿಕೇರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿಗೆ ಸಕಲೇಶಪುರ ತಾಲೂಕಿನ ಹೊಸಕೋಟೆ ಹೋಬಳಿಯ ಕಾಗನೂರು ಗ್ರಾಮದ ಅಪ್ಪನಿಗೌಡ ಅವರ ಕಾರು ಸಕಲೇಶಪುರದ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಶಾಂತಪುರ ಗ್ರಾಮದಲ್ಲಿ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯರು ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು. ಆದರೆ ಅಲ್ಲಿ ಸಿಬ್ಬಂದಿ ಇಲ್ಲದಿದ್ದರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ನಂತರ ದಾದಿಯೊಬ್ಬರು ಬಂದು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಕೂಡ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಗಂಗೇಗೌಡರು ಹಾಸನ ಆಸ್ಪತ್ರೆಯಲ್ಲಿ ಅಸುನೀಗಿದರು. ಕೊಡ್ಲಿಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.