

ಬೆಂಗಳೂರು: ಸಾಮಾನ್ಯವಾಗಿ ಜನರು ಮನೆಯನ್ನು ಲಾಕ್ ಮಾಡಿ ಅದರ ಕೀ ಅನ್ನು ಕಿಟಕಿ ಪಕ್ಕನೋ ಅಥವಾ ತಮಗೆ ಬೇಕಾದ ಕಡೆ ಇಡುವುದನ್ನು ನೋಡಿರುತ್ತೀರ. ಆದರೆ ಈ ಕೆಲಸ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಇಲ್ಲಾಂದ್ರೆ ನಿಮ್ಮ ಮನೆಯನ್ನು ಕ್ಷಣಾರ್ಧದಲ್ಲಿ ದೋಚುವ ಕತರ್ನಾಕ್ ಕಳ್ಳನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
19.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮನನ್ನು ಬಂಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯ ತಂದೆ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿದ್ದು, ಈತ 2009 ರಿಂದ ದುಶ್ಚಟಕ್ಕೆ ಬಿದ್ದಿದ್ದನು. ಈತನ ಮೇಲೆ ಇಲ್ಲಿಯವರೆಗೆ 32 ಕಳ್ಳತನ ಪ್ರಕರಣ ದಾಖಲಾಗಿದ್ದು, ಜೈಲಿಗೂ ಸಹ ಹೋಗಿ ಬಂದಿದ್ದನು. ಜೈಲಿನಿಂದ ಬಂದ ನಂತರ ಬುದ್ಧಿ ಕಲಿಯದ ಈತ ಮತ್ತೆ ಕಳ್ಳತನದ ಹಾದಿ ಹಿಡಿದಿದ್ದ.
ಕಿಟಕಿ ಪಕ್ಕ ಕೀ ಇಟ್ಟು ಹೋಗಿದ್ದ ಮಹಿಳೆಗೆ ಕಾದಿತ್ತು ಶಾಕ್:
ತನ್ನ ಮಗಳಿಗೆ ಡೆಲಿವರಿ ಆಗಿದೆ, ತನ್ನ ಕುಟುಂಬದವರೆ ಮನೆಗೆ ಬರ್ತಾರೆಂದು ಓರ್ವ ಮಹಿಳೆ ಕಿಟಕಿ ಪಕ್ಕ ಕೀ ಇಟ್ಟು ಹೋಗಿದ್ದರು. ಇದನ್ನ ಗಮನಿಸಿದ ಆರೋಪಿ ಮನೆಗೆ ನುಗ್ಗಿ 19.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಪರಾರಿಯಾಗಿದ್ದ.
ಈತ ಸಂಜಯನಗರ, ಮಲ್ಲೇಶ್ವರಂ, ಹೆಬ್ಬಾಳ, ಅಮೃತಹಳ್ಳಿ ಸೇರಿ ಹಲವೆಡೆ ಮನೆಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದನು. ಈಗ ಮತ್ತದೇ ಕೆಲಸ ಮಾಡಿ ಯಶವಂತಪುರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.