ಅಫ್ಘಾನ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥಕ್ಕೆ ಮುಂದಾದ ನಟಿಗೆ ತಾಲಿಬಾನಿಗಳ ಶಾಕ್

pic nati
Published on

ಹಿಂದಿ ಕಿರುತೆರೆ ಖ್ಯಾತ ನಟಿ ಆರ್ಶಿ ಖಾನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ, ಉಗ್ರರ ಕೈಯಲ್ಲಿ ಅಫ್ಘಾನಿಸ್ತಾನ ನಲುಗುತ್ತಿದ್ದು, ಇದರ ಎಫೆಕ್ಟ್ ಈ ನಟಿಗೂ ತಟ್ಟಿದೆ. ಅರೇ ತಾಲಿಬಾನಿಗಳಿಗೂ ಈ ನಟಿಗೂ ಏನು ಸಂಬಂಧ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅದಕ್ಕೆ ಕಾರಣ ಇಲ್ಲಿದೆ ನೋಡಿ.

ಖ್ಯಾತ ನಟಿ ಆರ್ಶಿ ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರರೊಬ್ಬರ ಜೊತೆ ಮದುವೆ ಆಗಲು ನಿರ್ಧರಿಸಿದ್ದರು. ಆದರೆ ಈಗ ಅದು ಕಷ್ಟಸಾಧ್ಯ ಎಂದು ಸ್ವತಃ ಆರ್ಶಿ ಖಾನ್​ ಮಾಹಿತಿ ಹೊರಹಾಕಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಪ್ರಾರಂಭವಾಗಿದೆ. ತಾಲಿಬಾನಿಗಳು ತಮಗೆ ಬೇಕಾದ ಹಾಗೆ ನಿಮಯಗಳನ್ನು ಮಾಡಿಕೊಂಡು ಆಡಳಿತ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರೆನ್ನದೇ ಬೀದಿ ಬೀದಿಗಳಲ್ಲಿ ಗುಂಡಿಟ್ಟು ಸಾಯಿಸುತ್ತಿದ್ದಾರೆ. ಅಲ್ಲಿ ಬದುಕುವುದು ಅಸಾಧ್ಯವಾಗಿದೆ.

ತಾಲಿಬಾನಿಗಳು ಆಫ್ಘನ್​ ಅನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಅಲ್ಲಿನ ಕ್ರಿಕೆಟರ್​ ಒಬ್ಬರ ಜೊತೆ ಆರ್ಶಿ ಮದುವೆ ಮಾಡಬೇಕು ಎಂದು ಅವರ ತಂದೆ ನಿರ್ಧರಿಸಿದ್ದರು. ಇದೇ ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ ನೆರವೇರಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಅಪ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಆ ದೇಶಕ್ಕೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ನಮ್ಮ ಕುಟುಂಬದ ಪೂರ್ವಜರು ಇದ್ದಿದ್ದು ಕೂಡ ಅಫ್ಘಾನಿಸ್ತಾನದಲ್ಲಿ. ನಮ್ಮ ತಾತ ಆಫ್ಘನ್​ನಿಂದ ಭೊಪಾಲ್​ಗೆ ವಲಸೆ ಬಂದು ಜೈಲರ್​ ಆಗಿದ್ದರು. ಆದರೆ ನನ್ನ ತಂದೆ-ತಾಯಿ ರೀತಿ ನಾನು ಅಪ್ಪಟ ಭಾರತೀಯಳು. ಈಗ ನನ್ನ ಪೋಷಕರು ನನಗೆ ಭಾರತೀಯ ಹುಡುಗನನ್ನೇ ಹುಡುಕುತ್ತಾರೆ ಎಂಬುದು ನನಗೆ ಖಾತ್ರಿ ಆಗಿದೆ ಎಂದು ಆರ್ಶಿ ಖಾನ್​ ಹೇಳಿದ್ದಾರೆ.

ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದು, ಹಲವಾರು ಆಲ್ಬಂ ಸಾಂಗ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net