23ರಂದು ಸಿದ್ದಕಟ್ಟೆ ಕಂಬಳ : ಪೊಡುಂಬ ಸಂದೀಪ್ ಶೆಟ್ಟಿ ಮಾಹಿತಿ

New Project
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ತಾಲೂಕಿನ ಎಲಿಯ ನಡುಗೋಡು ಗ್ರಾಮ ಸಿದ್ದಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ವೀರ-ವಿಕ್ರಮ ಜೋಡುಕರೆಯಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ ನಾಯ್ಕಾ ಉಳಿಪಾಡಿಗುತ್ತು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ, ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ಇವರ ನೇತೃತ್ವದಲ್ಲಿ ನ.23ರಂದು ವೀರ ವಿಕ್ರಮ ಜೋಡು ಕರೆ ಕಂಬಳ ಕೂಟ ನಡೆಯಲಿದೆ.

ಬೆಳಗ್ಗೆ 7.30ಕ್ಕೆ ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯರ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಉದ್ಘಾಟಿಸುವರು. ಕುಡುಂಬೂರುಗುತ್ತು ಕ್ಷೇತ್ರದ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್ ಮತ್ತಿತರ ಗಣ್ಯರು ಭಾಗವಹಿಸುವರು. ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕಾ ಅಧ್ಯಕ್ಷತೆ ವಹಿಸುವರು ಎಂದು ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಗೌರವ ಸಲಹೆಗಾರ ರಾದ ವಸಂತ ಶೆಟ್ಟಿ ಕೇದಗೆ, ಸುರೇಶ ಶೆಟ್ಟಿ ಸಿದ್ಧಕಟ್ಟೆ, ಕಿರಣ್ ಕುಮಾರ್ ಮಂಜಿಲ, ಸಂಘಟನಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಕುರುಡಾಡಿ ಉಪಸ್ಥಿತರಿದ್ದರು. ಒಂದು ವರ್ಷದಲ್ಲಿ 3 ಕಂಬಳ ಸುಸಜ್ಜಿತ ಹೊಸ ಜೋಡುಕರೆಯಲ್ಲಿ ಇದೇ ಪ್ರಥಮ ಬಾರಿಗೆ ಒಂದು ವರ್ಷದೊಳಗೆ 3 ನೇ ಕಂಬಳ ನಡೆಯುತ್ತಿದೆ.

ಕಳೆದ ಮಾ.16 ರಂದು ಪ್ರಥಮ ಕಂಬಳ ಮತ್ತು ಅ.19ರಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕೂಟ ನಡೆದಿದ್ದು, ಇದೀಗ ನ.23ರಂದು ಮತ್ತೆ 2ನೇ ವರ್ಷದ ಕಂಬಳ ನಡೆಯುತ್ತಿದೆ.

ಮಳೆಗಾಲದಲ್ಲಿ ಗುಡ್ಡದ ನೀರು ಕಂಬಳ ಕರೆಗೆ ಹರಿದು ಬಾರದಂತೆ ತಡೆಯಲು ಸುತ್ತಲೂ ಸುಮಾರು 30 ಸಿಮೆಂಟ್ ಪೈಪ್ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಕೂಡಾ ಕಂಬಳ ಕರೆಗೆ ನಿರಂತರ ನೀರಿನ ಸಂಪರ್ಕ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net