

ಬೆಳ್ತಂಗಡಿ: ಬಂಗೇರ ಬ್ರಿಗೇಡ್ ಬೆಳ್ತಂಗಡಿ ಆಶ್ರಯದಲ್ಲಿ ಬಿನುತಾ ಬಂಗೇರ ಸಾರಥ್ಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಾಜಿ ಶಾಸಕ ದಿ.ವಸಂತ ಬಂಗೇರ ಅವರ 79ನೇ ಜನ್ಮದಿನದ ಪ್ರಯುಕ್ತ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಜ.15ರಂದು ಮದ್ದಡ್ಕದ ಬಂಡಿಮಠ ಮೈದಾನದಲ್ಲಿ ನಡೆಯಲಿದೆ ಎಂದು ಬ್ರಿಗೇಡ್ ಗೌರವಾಧ್ಯಕ್ಷೆ ಪ್ರಿತೀತಾ ಬಂಗೇರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗದ ಪಂದ್ಯಾಟ ಬೆಳಗ್ಗೆ 9.30ಕ್ಕೆ ಪ್ರಾರಂಭವಾದರೆ ಪುರುಷರ ಮುಕ್ತ ವಿಭಾಗದ ಪಂದ್ಯಾಟವು ಸಂಜೆ 5.30ಕ್ಕೆ ಪ್ರಾರಂಭಗೊಳ್ಳಲಿದೆ. ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಆಲ್ ರೌಂಡರ್, ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಗಳಿಸಿದ ತಂಡಗಳಿಗೆ ನಗದು ಹಾಗೂ ಬಂಗೇರ ಬ್ರಿಗೇಡ್ ಟ್ರೋಫಿ ಪ್ರದಾನಿಸಲಾಗುವುದು. ಭಾಗವಹಿಸಿದ ಪ್ರತಿ ಹೈಸ್ಕೂಲ್ ಮಕ್ಕಳ ತಂಡಗಳಿಗೆ ಶಾಶ್ವತ ಫಲಕ ಮತ್ತು ಸೆಮಿಫೈನಲ್ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿಪತ್ರ ನೀಡಲಾಗುವುದು. ಪಂದ್ಯಾಟವನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ ಎಂದರು.
ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಸದಸ್ಯರಾದ ರಾಜಶ್ರೀ ರಮಣ್, ವೇದಾಂತ, ಅನೂಪ್ ಎಂ.ಬಂಗೇರ, ರಾಕೇಶ್ ಮೂಡುಕೋಡಿ, ಸಲೀಂ ಗುರುವಾಯನಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.