

ಚಿಂತಾಮಣಿ: ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಹಳೇ ತಾಲೂಕು ಕಚೇರಿ, ನಗರ ಮತ್ತು ಗ್ರಾಮಾಂತರ ಠಾಣೆ, ಡಿವೈಎಸ್ಪಿ ಕಚೇರಿ ಸೇರಿ ಸುಮಾರು 1 ಎಕರೆ 11 ಗುಂಟೆ ಜಾಗವನ್ನು ಆಸ್ಪತ್ರೆ ನಿಮಾರ್ಣಕ್ಕೆ ಹಸ್ತಾಂತರಿಸಲಾಗಿದೆ. ಈ ಜಾಗದಲ್ಲಿ ಐಸಿಯು ಘಟಕ ನಿರ್ಮಾಣವಾಗಲಿರುವ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಟ್ಟಡದೊಳಗಿನ ಹಾಗೂ ಹೊರಗಿನ ಸಾಮಗ್ರಿಗಳ ತೆರವು ಮಾಡಲಾಯಿತು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಕ್ಕದಲ್ಲಿಯೇ ಇರುವ ಹಳೇ ತಾಲೂಕು ಕಚೇರಿ ಆವರಣದಲ್ಲಿ 16 ಕೋಟಿ ರೂ. ವೆಚ್ಚದ 50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಭೂಮಿಪೂಜೆಗೆ ಸಿದ್ದತೆ ನಡೆದಿದ್ದು, ಈ ಸಲುವಾಗಿ ಕಟ್ಟಡಗಳು ತೆರವಾಗಲಿದ್ದು, ಹಳೇ ತಾಲೂಕು ಕಚೇರಿಯಲ್ಲಿದ್ದ ಸಾಮಗ್ರಿಗಳನ್ನು ತಾತ್ಕಾಲಿಕವಾಗಿ ಬೆಂಗಳೂರು ಜೋಡಿ ರಸ್ತೆಯಲ್ಲಿರುವ ಹಳೇ ತಾಲೂಕು ಪಂಚಾಯಿತಿ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಚುನಾವಣೆ ಶಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಾಲೂಕಿನ ಎಲ್ಲ ಗ್ರಾಮ ಸಹಾಯಕರೊಂದಿಗೆ ಎರಡು ದಿನ ಸಾಮಗ್ರಿಗಳನ್ನು ಕಟ್ಟಿ ಮೂಟೆಗಳಲ್ಲಿ ತುಂಬಿ ಹಳೇ ತಾಪಂ ಕಚೇರಿಗೆ ಸಾಗಿಸಲಾಯಿತು.
ಅವಸಾನದ ಅಂಚಿಗೆ ತಲುಪಿರುವ ತಾಲೂಕು ಪಂಚಾಯಿತಿ ಕಚೇರಿಯ ಕಟ್ಟಡವನ್ನೂ ಮುಂದಿನ ದಿನದಲ್ಲಿ ನೆಲಸಮ ಮಾಡಲು ಸಚಿವರು ಯೋಜನೆ ರೂಪಿಸಿದ್ದು, ಈಗ ದಾಸ್ತಾನು ಮಾಡಿರುವ ಕಡತ, ಸಾಮಗ್ರಿಗಳನ್ನು ಎಲ್ಲಿಗೆ ಸಾಗಿಸಬೇಕಾಗುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಹಳೇ ತಾಲೂಕು ಕಚೇರಿಯ ಪಕ್ಕದಲ್ಲಿಯೇ ಇರುವ ನಗರ ಮತ್ತು ಗ್ರಾಮಾಂತರ ಠಾಣೆ ಹಾಗೂ ಡಿವೈಎಸ್‌ಪಿ ಕಚೇರಿ ಕಟ್ಟಡಗಳನ್ನು ನೆಲಸಮ ಮಾಡಲಿದ್ದು, ಈಗಾಗಲೇ ಅಂಜನಿ ಬಡಾವಣೆಯ ಹಳೇ ಪೊಲೀಸ್ ವಸತಿ ಸಮುಚ್ಚಯದ ಆವರಣದಲ್ಲಿರುವ ನೂತನ ಕಟ್ಟಡಕ್ಕೆ ನಗರ ಠಾಣೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಎಂ.ಜಿ. ರಸ್ತೆಯ ತಿಮ್ಮಸಂದ್ರ ಬಳಿ ನಿರ್ಮಿಸಿರುವ ಕಟ್ಟಡಕ್ಕೆ ಗ್ರಾಮಾಂತರ ಠಾಣೆಯನ್ನು ಸ್ಥಳಾಂತರ ಮಾಡಲಾಗಿದೆ. ಉಳಿದ ಡಿವೈಎಸ್‌ಪಿ ಕಚೇರಿ ಎಲ್ಲಿಗೆ ಸ್ಥಳಾಂತರವಾಗುತ್ತದೆ ಎನ್ನುವುದು ಇನ್ನು ನಿರ್ಧಾರ ಮಾಡಿಲ್ಲ ಎನ್ನಲಾಗಿದೆ.
ನಗರ ಮತ್ತು ಗ್ರಾಮಾಂತರ ಠಾಣೆ ಆವರಣದಲ್ಲಿದ್ದ ಅಪಘಾತಕ್ಕೀಡಾದ ವಾಹನಗಳು, ಮಾಲೀಕರು ಪತ್ತೆಯಾಗದ ಕಳವಾದ ವಾಹನಗಳು ಸೇರಿ ಇತರ ವಾಹನಗಳ ರಾಶಿ ಬಿದ್ದಿದೆ. ಆಸ್ಪತ್ರೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಈ ವಾಹನಗಳನ್ನು ಕೈವಾರ ಹೊರಠಾಣೆಗೆ ಸಾಗಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.