

ಬೆಂಗಳೂರು: ಹಳೆ ಪಿಂಚಣಿ ಯೋಜನೆ(ಒಪಿಎಸ್)ಯು ಸರ್ಕಾರಿ ನೌಕರರ ಸಂವಿಧಾನಬದ್ಧ ಹಕ್ಕು ಆಗಿದೆ ಎಂದು ಹೈಕೋರ್ಟ್ನ ನಿವೃತ್ತ ನ್ಯಾ.ಚಂದ್ರಶೇಖರಯ್ಯ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಕರ್ನಾಟಕ ಎನ್ಪಿಎಸ್ ನೌಕರರ ಸಂಘ, ಭಾನುವಾರ ಕಬ್ಬನ್ಪಾರ್ಕ್ ಆವರಣದ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ "ಎನ್ಪಿಎಸ್ ಟು ಒಪಿಎಸ್' ಕಾರ್ಯಗಾರದ ಸಭೆಯಲ್ಲಿ ಮಾತನಾಡಿದರು. ಹೊಸ ಪಿಂಚಣಿ ಯೋಜನೆ(ಎನ್ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರಿ ನೌಕರರ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇರಲಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರದಿಂದ ಈವರೆಗೆ 25 ಆದೇಶ ಮಾಡಿಸಿ ನೌಕರರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿದ್ದಾನೆ. 7ನೇ ವೇತನ ಆಯೋಗ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದೇವೆ. ದೊಡ್ಡ ಬೇಡಿಕೆಯಾದ ಒಪಿಎಸ್ ಜಾರಿಯ ಕುರಿತು ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು. ಇದರ ಸಾಧಕ-ಬಾಧಕ ಕುರಿತು ಸರ್ಕಾರ ಮಟ್ಟದಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ. ಸರ್ಕಾರಕ್ಕೆ ಸಮಿತಿ ವರದಿ ನೀಡಿದ ನಂತರ ಸಿಎಂ, ಡಿಸಿಎಂ ಜೊತೆ ನಿರಂತರ ಸಂಪರ್ಕ ಸಾಧಿಸಿ ಒಪಿಎಸ್ ಜಾರಿಗೆ ಪ್ರಯತ್ನ ಮಾಡಲಾಗುವುದು ಎಂದರು.
ಪ್ರೊ.ರಾಧಕೃಷ್ಣ ಮಾತನಾಡಿ, ನೌಕರರ ಭಾವನೆಯನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಬಂದಿದ್ದೇನೆ. ಎನ್ಪಿಎಸ್ ರದ್ದುಗೊಳಿಸುವ ಪ್ರಣಾಳಿಕೆ ಭರವಸೆ ನೀಡುವಲ್ಲಿ ನೌಕರರ ಪರವಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಭರವಸೆ ನೀಡಿದ ಪಕ್ಷ ಅಧಿಕಾರದಲ್ಲಿದೆ. ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸದಿದ್ದಲ್ಲಿ ಕೋರ್ಟ್ನಲ್ಲಿ ದಾವೆ ಹೂಡುವ ಅವಕಾಶ ಇದೆಯೇ ಅಥವಾ ಇಲ್ಲವೋ ಎಂಬುದನ್ನೂ ಪರಿಶೀಲಿಸಿದ್ದೇನೆ ಎಂದರು.
ಸಂಘದ ಅಧ್ಯಕ್ಷ ಎಂ.ಎ.ನಾಗನಗೌಡ, ಗೌರವಾಧ್ಯಕ್ಷ ರಮೇಶ್ ಸಂಗಾ, ಕಾರ್ಯಾಧ್ಯಕ್ಷ ಡಾ.ಸದಾನಂದ ನೆಲ್ಕುದ್ರಿ, ಪ್ರಧಾನ ಕಾರ್ಯದರ್ಶಿ ಆರ್. ಎ.ಚಂದ್ರಶೇಖರ್ ಸೇರಿ ನೂರಾರು ನೌಕರರು ಉಪಸ್ಥಿತರಿದ್ದರು.