ಹಳೇ ಕಡತಗಳ ವಿಲೇವಾರಿ ಮಾಡಿದ ತಾಲೂಕು ಆಡಳಿತ

11-pnp 1
Published on

ಪಾಂಡವಪುರ: ತಾಲೂಕು ಆಡಳಿತವನ್ನು ಚುರುಕುಗೊಳಿಸುವ ಹಿನ್ನಲೆಯಲ್ಲಿ ರಜಾ ದಿನಗಳಲ್ಲೂ ಕೆಲಸ ನಿರ್ವಹಿಸಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಎಲ್ಲ ಆಧಿಕಾರಿಗಳು ರಜಾ ದಿನದಲ್ಲೂ ಕೆಲಸ ನಿರ್ವಹಿಸಿದರು.


ಎರಡನೇ ಶನಿವಾರ ಹಾಗೂ ಭಾನುವಾರ ಎರಡು ದಿನಗಳು ರಜೆ ಪಡೆಯದ ಅಧಿಕಾರಿಗಳು ಕಚೇರಿಯಲ್ಲಿ ತಿಂಗಳುಗಳಿಂದ ಬಾಕಿ ಉಳಿದಿದ್ದ ಕಡತಗಳನ್ನು ಪರಿಶೀಲಿಸಿ ಹಂತ ಹಂತವಾಗಿ ವಿಲೇವಾರಿ ಮಾಡಿದರು. ಈ ಹಿಂದಿನ ತಹಸೀಲ್ದಾರ್ ಕೆ.ಸಿ.ಸೌಮ್ಯಾ ತಮ್ಮ ಅಧೀನ ಸಿಬ್ಬಂದಿಯಿಂದಲೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದರು. ನಂತರದ ದಿನಗಳಲ್ಲಿ ಕಾಯಂ ತಹಸೀಲ್ದಾರ್ ನೇಮಕವಾಗದ ಪರಿಣಾಮ ಸಾರ್ವಜನಿಕರ ಕೆಲಸ ಕಾರ್ಯಗಳು ಬಾಕಿ ಉಳಿದುಕೊಂಡಿದ್ದವು.


ಜತೆಗೆ ಗ್ರಾಮಾಂತರ ಪ್ರದೇಶದ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ತಾಲೂಕು ಕಚೇರಿಯನ್ನು ಅಲೆಯುವುದನ್ನು ಗಮನಿಸಿದ್ದ ಮತ್ತು ಹಲವು ಬಾರಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಹಸೀಲ್ದಾರ್ ಎಸ್.ಸಂತೋಷ್ ಅವರಿಗೆ ರಜಾ ದಿನಗಳಲ್ಲಿ ಕೆಲಸ ನಿರ್ವಹಿಸಿ ಕಡತಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದ್ದರು. ಶಾಸಕರ ಸೂಚನೆಯಂತೆ ತಹಸೀಲ್ದಾರ್ ಅವರು ಖುದ್ದು ಎರಡು ದಿಗಳ ಕಾಲ ಕರ್ತವ್ಯ ನಿರ್ವಹಿಸಿ ಸುಮಾರು 500ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.


ತಹಸೀಲ್ದಾರ್ ಎಸ್.ಸಂತೋಷ್, ಉಪ ತಹಸೀಲ್ದಾರ್ ವರುಣ್, ಶಿರಸ್ತೇದಾರ್ ಮೋಹನ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತದ 15 ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 50 ಸಿಬ್ಬಂದಿ ಶಾಸಕರ ಸೂಚನೆಯಂತೆ ಎರಡು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ನಿರ್ವಹಿಸಿ ಬಾಕಿ ಉಳಿಸಿಕೊಂಡಿದ್ದ ಕಡತಗಳ ವಿಲೇವಾರಿ ಮಾಡಿದರು. ಇನ್ನೂ ಆರು ತಿಂಗಳು ಕಾಲದಲ್ಲಿ ಸಿಗುವ ರಜಾ ದಿನಗಳಲ್ಲೂ ಇದೇ ರೀತಿ ಕೆಲಸ ನಿರ್ವಹಿಸಿದರೆ ಕಚೇರಿಯ ಬಾಕಿ ಇರುವ ಕಡತಗಳ ಕೆಲಸ ಸಂಪೂರ್ಣ ಮುಗಿಯುತ್ತದೆ . ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಕಚೇರಿ ಸ್ವಚ್ಛಗೊಳಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ


ತಮ್ಮ ಸೂಚನೆ ಮೇರೆಗೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದ ಎರಡು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಅಧಿಕಾರಿಗಳಿಗೆ ಸಾಥ್ ನೀಡಿದ ದರ್ಶನ್ ಪುಟ್ಟಣ್ಣಯ್ಯ ತಾವು ಸುಮ್ಮನೆ ಕೂರದೆ ಪೊರಕೆ ಹಿಡಿದು ಪಕ್ಷದ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿ ಸ್ವಚ್ಛತೆಗೆ ಮುಂದಾದರು.
ತಾಲೂಕು ಕಚೇರಿಯಲ್ಲಿ ಕಟ್ಟಿದ್ದ ಜೇಡರಬಲೆ, ಧೂಳುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಕಚೇರಿಯ ಒಂದು ಮೂಲೆಯಲ್ಲಿ ವರ್ಷಗಳಿಂದ ಬಿದ್ದಿದ್ದ ಡಬ್ಬಗಳನ್ನು ತೆರವುಗೊಳಿಸಿದರು. ಜತೆಗೆ ಪೌರಕಾರ್ಮಿಕರ ಸಹಾಯದೊಂದಿಗೆ ಕಚೇರಿಯ ಒಳ ಮತ್ತು ಹೊರ ಭಾಗದಲ್ಲೂ ಶೌಚಗೃಹಗಳನ್ನು ಸ್ವಚ್ಛತೆ ಮಾಡಿ, ಕಚೇರಿ ಎಂದರೆ ಹೀಗಿರಬೇಕು ಎನ್ನುವ ರೀತಿ ಮಾಡಿದರು.


ಹಳೆಯ ಕಡತಗಳು ವಿಲೇವಾರಿಯಾದರೆ ಹೊಸ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು. ಅನೇಕ ಕಾರಣಗಳಿಂದಾಗಿ ಕಡತಗಳು ಪೆಡ್ಡಿಂಗ್ ಉಳಿದಿದೆ. ಇದರಿಂದ ಸಾರ್ವಜನಿಕರಿಗಷ್ಟೇ ಅಲ್ಲದೇ ಅಧಿಕಾರಿಗಳಿಗೂ ಕೆಲಸ ಒತ್ತಡ ಹೆಚ್ಚುತ್ತದೆ. ಶಾಸಕರ ಸೂಚನೆ ಸೂಕ್ತವಾಗಿದ್ದು, ನಮಗೂ ಉತ್ತೇಜನ ಸಿಕ್ಕಿದಂತಾಗಿದೆ. ರಜೆ ದಿನಗಳಲ್ಲಿ ಕೆಲಸ ಮಾಡಿ ಒತ್ತಡ ಕಡಿಮೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಎಸ್.ಸಂತೋಷ್, ತಹಸೀಲ್ದಾರ್

ಸಮಸ್ಯೆ ಹೇಳಿದ ಅಧಿಕಾರಿಗಳು


ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೇ.30 ರಷ್ಟು ಸಿಬ್ಬಂದಿ ಹುದ್ದೆ ಖಾಲಿ ಇದೆ. ಖಾಲಿ ಹುದ್ದೆಗಳ ಕೆಲಸಗಳು ಇತರರ ಮೇಲೆ ಬೀಳುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಹಲವು ಹುದ್ದೆಗಳು ಭರ್ತಿಯಾಗಬೇಕಿದೆ ಎಂದು ಅಧಿಕಾರಿಗಳು ತಾಲೂಕು ಕಚೇರಿಯಲ್ಲಿನ ಸಮಸ್ಯೆಗಳನ್ನು ಶಾಸಕರಿಗೆ ಹೇಳಿದರು. ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವುದಾಗಿ ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net