ಹಳೇ ಕ್ರೆಸ್ಟ್‌ಗೇಟ್ ಕಡಿಮೆ ಬೆಲೆಗೆ ಮಾರಾಟ

oppo_0
ಎ.ಎಲ್.ಕೆಂಪೂಗೌಡ, ಜಿಲ್ಲಾ ರೈತಸಂಘ ಅಧ್ಯಕ್ಷರು.
Published on

ಪಾಂಡವಪುರ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಕೆಆರ್‌ಎಸ್ ಅಣೆಕಟ್ಟೆಯ ಐತಿಹಾಸಿಕ ಮಹತ್ವವುಳ್ಳ ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿರುವ ಜಲಸಂಪನ್ಮೂಲ ಇಲಾಖೆಯ ನಿರ್ಧಾರವನ್ನು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಖಂಡಿಸಿದರು.

ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣವಾದಾಗ ಅಳವಡಿಸಲಾಗಿದ್ದ 150 ಕ್ರೆಸ್ಟ್ ಗೇಟ್‌ಗಳನ್ನು ಇತ್ತೀಚೆಗೆ ಬದಲಾವಣೆ ಮಾಡಲಾಗಿದೆ. ನಾಲ್ವಡಿ ಅವರ ಕಾಲದಲ್ಲಿ ಕೇವಲ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಣೆಕಟ್ಟೆ ಒಡೆಯರ ಅಳ್ವಿಕೆ ಕಾಲದ ಅತ್ಯಂತ ಹೆಮ್ಮೆಯ ಕೊಡುಗೆಯಾಗಿದೆ. ಅಣೆಕಟ್ಟೆ ನಿರ್ಮಾಣಕ್ಕಾಗಿ ಬಳಸಲಾಗಿರುವ ಪ್ರತಿಯೊಂದು ಸಾಮಗ್ರಿಗಳನ್ನು ಮ್ಯೂಸಿಯಂನಲ್ಲಿಟ್ಟು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಆದರೆ ಸರ್ಕಾರ ಮತ್ತು ನೀರಾವರಿ ನಿಗಮದ ಅಧಿಕಾರಿಗಳು ಹಳೇಯ ಗೇಟ್‌ಗಳನ್ನು ಮಾಣಿಕೇಶ್ವರಿ ಎಂಬ ಸಂಸ್ಥೆಗೆ ಕೆ.ಜಿಗೆ 6 ರೂ.ನಂತೆ ಮಾರಾಟ ಮಾಡುತ್ತಿರುವುದು ದುರಾದೃಷ್ಟಕರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಒಂದು ಶತಮಾನ ಕಾಲ ಬಾಳಿಕೆ ಬಂದಿರುವ ಅಣೆಕಟ್ಟೆಯ ಒಂದು ಕ್ರೆಸ್ಟ್ ಗೇಟಿನ ತೂಕ ಸುಮಾರು 4 ಟನ್‌ಗಳಷ್ಟಿದೆ. ಅದರಂತೆ ಬದಲಾವಣೆಗೊಂಡಿರುವ 150 ಗೇಟ್‌ಗಳ ಒಟ್ಟು ತೂಕ 608 ಟನ್ ಆಗಿದ್ದು, ಇದನ್ನು ಕೆ.ಜಿಗೆ 6 ರೂ.ಗಳಂತೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಒಂದು ಕೆ.ಜಿ ಹಳೆಯ ಕಬ್ಬಿಣದ ಬೆಲೆ 40 ರೂಪಾಯಿ ಇದ್ದು, ಇದರ ಮೌಲ್ಯ ಇಂದಿನ ಮಾರುಕಟ್ಟೆ ಬೆಲೆಯಂತೆ 2.5 ಕೊಟಿ ರೂ. ಇದೆ. ಆದರೆ 150 ಗೇಟ್‌ಗಳನ್ನು ಕೆ.ಜಿಗೆ 6 ರೂಪಾಯಿಯಂತೆ ಕೇವಲ 36 ಲಕ್ಷ ರೂ.ಗೆ ಮಾರಾಟ ಮಾಡುತ್ತಿರುವ ಅಧಿಕಾರಿಗಳ ಒಳಮರ್ಮ ತಿಳಿಯುತ್ತಿಲ್ಲ. ಜತೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಯೂ ಇಲ್ಲ ಎಂದು ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಕೆಆರ್‌ಎಸ್ ಬೃಂದಾವನದಲ್ಲಿ ಎಕರೆಗಟ್ಟಲೇ ಜಾಗ ಲಭ್ಯವಿದ್ದು, ಈ ಸ್ಥಳದಲ್ಲಿ ಅಣೆಕಟ್ಟೆಯ ನಿಮಾಣಕ್ಕೆ ಬಳಸಲಾಗಿರುವ ಹಳೆಯ ಮತ್ತು ಬದಲಾವಣೆ ಮಾಡಲಾದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟು ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನು ಬಿಟ್ಟು ಅಲ್ಪ ಮೊತ್ತಕ್ಕೆ ಅಣೆಕಟ್ಟೆಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಗತ್ಯವಾದರೂ ಏನಿದೆ? ಅಣೆಕಟ್ಟೆ ಕಟ್ಟಿದ ಒಡೆಯರ್ ಅವರಿಗೆ ಸಹಕಾರ ನೀಡಿದ ದಿವಾನರು, ಇಂಜಿನಿಯರ್ ಇತರ ಮಹನೀಯರ ಭಾವಚಿತ್ರಗಳು ಮತ್ತು ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯನ್ನು ವಸ್ತುಸಂಗ್ರಹಾಲಯ ಸಂಗ್ರಹಿಸಡಬೇಕಿದೆ ಎಂದರು.

ಸರ್ಕಾರಕ್ಕೆ ಪತ್ರ: ಗೇಟ್‌ಗಳನ್ನು ಮಾರಾಟ ಮಾಡದಂತೆ ಸರ್ಕಾರ, ನೀರಾವರಿ ಇಲಾಖೆ ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆದು ಗೇಟ್‌ಗಳನ್ನು ಮಾರಾಟ ಮಾಡದಂತೆ ಮನವಿ ಮಾಡಲಾಗುವುದು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ಹೋರಾಟದ ಮೂಲಕ ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net