ಅಪಾಯಕಾರಿ ಮರಗಳಿಂದ ಜೀವಹಾನಿ ಯಾರು ಹೊಣೆ?: ಅರಣ್ಯ ಇಲಾಖೆ ವಿರುದ್ಧ ಆರೋಪ : ಒಳಮೊಗ್ರು ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಪ್ರಶ್ನೆ

New Project (47)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ಮನೆಯೊಂದರ ಪಕ್ಕದಲ್ಲಿ ಬೀಳುವ ಸ್ಥಿತಿಯಲ್ಲಿ ಮರವೊಂದಿದ್ದು, ಈ ಮರ ಉರುಳಿ ಬಿದ್ದರೆ ಪಕ್ಕದಲ್ಲಿರುವ ಎರಡು ಮನೆಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ತೆರವು ಕಾರ್ಯ ನಡೆದಿಲ್ಲ ಎಂಬ ಆರೋಪ ಒಳಮೊಗ್ರು ಗ್ರಾ.ಪಂ. ವಿಪತ್ತು ನಿರ್ವಹಣಾ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.

ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿ ಸಭೆ ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸದಸ್ಯರು ಈ ವಿಚಾರ ಪ್ರಸ್ತಾಪಿಸಿದಾಗ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಮರ ಮುರಿದು ಬಿದ್ದು ಜೀವ ಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿ, ತಕ್ಷಣವೇ ಮರ ತೆರವುಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ, ಗ್ರಾಪಂ ಸದಸ್ಯರಾದ ಲತೀಫ್ ಕುಂಬ್ರ, ವಿನೋದ್ ಶೆಟ್ಟಿ ಮುಡಾಲ, ಸುಂದರಿ, ಶಾರದಾ, ಬಿ.ಸಿ.ಚಿತ್ರಾ, ರೇಖಾ ಯತೀಶ್, ನಳಿನಾಕ್ಷಿ ಮತ್ತಿತರರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಸ್ವಾಗತಿಸಿದರು. ಗ್ರಾಪಂ ಕಾರ್ಯದರ್ಶಿ ಜಯಂತಿ ಅವರು ಸಭೆಯಲ್ಲಿ ವ್ಯಕ್ತವಾದ ಬೇಡಿಕೆ, ಸಮಸ್ಯೆಗಳನ್ನು ದಾಖಲಿಸಿಕೊಂಡರು.

ಗ್ರಾಮದ ಹಲವು ಕಡೆಗಳಲ್ಲಿ ಧರೆ ಕುಸಿತ

ಮುಂಗಾರು ಆರಂಭದ ದಿನಗಳಲ್ಲೇ ಗ್ರಾಮದ ಹಲವು ಕಡೆಗಳಲ್ಲಿ ಕೆಲವೊಂದು ಧರೆ ಕುಸಿತದಂತಹ ಟನೆಗಳು ನಡೆದಿದ್ದು, ಮನೆಗಳಿಗೆ ಹಾನಿ ಸಂಭವಿಸಿದೆ. ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಪಿಡಿಒ ಅವಿನಾಶ್ ಬಿ.ಆರ್. ತಿಳಿಸಿದರು. ಸಮಿತಿ ನೋಡೆಲ್ ಅಧಿಕಾರಿ ಮೆಸ್ಕಾಂ ಎಇಇ ಶಿವಶಂಕರ್, ಗ್ರಾಮದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ತಕ್ಷಣ ಗ್ರಾ.ಪಂ. ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಅಧಿಕಾರಿಗಳಿಗೆ ಅಥವಾ ಸದಸ್ಯರಿಗೆ ತಿಳಿಸಬೇಕೆಂದು ಮನವಿ ಮಾಡಿಕೊಂಡರು.

ಹೆದ್ದಾರಿ ಬದಿ ಅಪಾಯಕಾರಿ ಹೊಂಡ

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯ ಕೆಲವೆಡೆ ರಸ್ತೆ ಬದಿಯಲ್ಲಿ ಅಪಾಯಕಾರಿ ಹೊಂಡಗಳು ನಿರ್ಮಾಗೊಂಡಿವೆ. ಕುಂಬ್ರ ಸೇತುವೆ ಸಮೀಪ ರಸ್ತೆ ಬದಿಯಲ್ಲಿ ದೊಡ್ಡ ಗಾತ್ರದ ಕಣಿ ನಿರ್ಮಾಗೊಂಡಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಾಯ ತಂದೊಡ್ಡಿವೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಎಂದು ನಿರ್ಣಯಿಸಲಾಯಿತು.

ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ

ಶೇಖಮಲೆ, ದರ್ಬೆತ್ತಡ್ಕ, ಅಜಲಡ್ಕ ಪರಿಸರದಲ್ಲಿ ವಿದ್ಯುತ್ ಕಂಬಗಳಿಗೆ ಅಪಾಯ ತರಬಲ್ಲ ಮರ ಹಾಗೂ ಗೆಲ್ಲುಗಳಿದ್ದು, ಈ ಬಗ್ಗೆ ಮೆಸ್ಕಾಂ ಜಾಗ್ರತೆ ವಹಿಸಬೇಕು ಎಂದು ಸದಸ್ಯ ಶೀನಪ್ಪ ನಾಯ್ಕ ಆಗ್ರಹಿಸಿದರು. ಕೈಕಾರ ಆರೋಗ್ಯ ಇಲಾಖೆಯ ಆರೋಗ್ಯ ಉಪಕೇಂದ್ರದ ಬಳಿ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದೆ. ಇದರಿಂದ ಅಪಾಯವಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಸಿಎಚ್‌ಒ ವಿದ್ಯಾಶ್ರೀ ತಿಳಿಸಿದರು. ದೇವಸ್ಯದೇರ್ಲ ರಸ್ತೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಕಾಮಗಾರಿಯಿಂದ ಚರಂಡಿ ಸಮಸ್ಯೆ ಉಂಟಾಗಿದ್ದು, ಮಳೆ ನೀರು ಹರಿದು ಹೋಗಲು ಸಮಸ್ಯೆಯಾಗಿದೆ ಎಂದು ಸದಸ್ಯ ಮಹೇಶ್ ರೈ ಕೇರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net