

ಬೆಂಗಳೂರು: ಕಂಪನಿಯ ಹೆಸರು, ಉತ್ಪನ್ನದ ಮಾರ್ಕೆಟಿಂಗ್ ಮಾಡಲು ಮಾಲೀಕರು ಹಾಗೂ ಆಡಳಿತ ಸಿಬ್ಬಂದಿ ತರಹೇವಾರಿ ಉಪಕ್ರಮಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕೆಲವು ಸಾಮಾನ್ಯ ಎನಿಸಿದರೆ, ಮತ್ತೆ ಕೆಲವು ಆಶ್ಚರ್ಯ ಮೂಡಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ, ಎಂದರೆ ಓಲಾ ಎಲೆಕ್ಟ್ರಿಕ್ ಕಂಪನಿ, ಶ್ವಾನವೊಂದನ್ನು ತನ್ನ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದೆ!
ಈ ಬಗ್ಗೆ ಸಂಸ್ಥೆಯ ಸಿಇಒ ಭವೀಶ್ ಅಗರ್ವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಓಲಾ ವಾಹನ ಕ್ಷೇತ್ರಕ್ಕೆ ಸಂಬಂಧಿಸಿರುವುದರಿಂದ, ತನ್ನ ನೂತನ ಉದ್ಯೋಗಿಗೆ ಹಿಂದಿಯಲ್ಲಿ "ಬಿಜಲಿ' (ವಿದ್ಯುತ್) ಎಂದು ನಾಮಕರಣ ಮಾಡಿದೆ. ಒಲಾ ಎಲೆಕ್ಟ್ರಿಕ್ ವಾಹನವಾಗಿದ್ದರಿಂದ ಈ ಹೆಸರು ಇಡಲಾಗಿದೆ.
ಅಲ್ಲದೆ, ಗುರುತಿನ ಚೀಟಿ, ಉದ್ಯೋಗಿ ಸಂಖ್ಯೆ ಎಲ್ಲವನ್ನೂ ನೀಡಿದೆ. ಕೋರಮಂಗಲದಲ್ಲಿ ಓಲಾ ಸಂಸ್ಥೆಯ ಕಚೇರಿಯಿದ್ದು, ಅಲ್ಲಿ ಈ ಶ್ವಾನ ಇದೆ ಎಂದು ಬರೆದುಕೊಂಡಿದ್ದಾರೆ. ನಾಯಿಯ ಹುದ್ದೆಯನ್ನು "ಓಲಾ ಎಲೆಕ್ಟ್ರಿಕ್ ಐಡಿ ಕಾರ್ಡ್ ಹೋಲ್ಡರ್' ಎಂದು ತಿಳಿಸಲಾಗಿದೆ. ಶ್ವಾನದ ರಕ್ತದ ಗುಂಪು ಮಾಹಿತಿಯನ್ನು ಐಡಿ ಕಾರ್ಡ್ನಲ್ಲಿ ನಮೂದಿಸಲಾಗಿದೆ.