ವೋಟಿಗೆ 5 ಸಾವಿರ ರೂಪಾಯಿ, ಬೆಳ್ಳಿ ಬಟ್ಟಲುಗಳ ಗಿಫ್ಟ್

Election Okkaliga Brahmana
Published on

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಿ.12ರ ಭಾನುವಾರ ಏಕಕಾಲದಲ್ಲಿ ನಡೆದರೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಡಿ.12 ಹಾಗೂ ಡಿ.19ರಂದು ಎರಡು ಹಂತದಲ್ಲಿ ನಡೆಯಲು ಸಿದ್ಧತೆ ನಡೆದಿದೆ. ಮತದಾನಕ್ಕೆ ಇನ್ನೆರಡು ದಿನ ಸಮೀಪಿಸುತ್ತಿದ್ದಂತೆ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಭರ್ಜರಿ ಪ್ರಚಾರದ ಜತೆಗೆ ಹಣದ ಹೊಳೆ ಹರಿಸುತ್ತಿದ್ದಾರೆ.

ಅನೇಕ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜು, ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಹೊಂದಿರುವ ಒಕ್ಕಲಿಗರ ಸಂಘದ ಚುನಾವಣೆ ಯಾವುದೇ ರಾಜಕೀಯ ಚುನಾವಣೆಯನ್ನೂ ಮೀರಿಸಿ, ಪ್ರತಿ ವೋಟಿಗೆ ಕಾಸು ಎಂಬಂತೆ ರಂಗು ಪಡೆದಿದೆ. ಹಣದ ಬಲವಿರುವ ಸಿಂಡಿಕೇಟ್ ಅಭ್ಯರ್ಥಿಗಳು ತಲಾ ವೋಟಿಗೆ 5000 ರೂ. ಕೊಡುತ್ತಿದ್ದಾರೆ. ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮತವಿದ್ದರೆ 10,000 ರೂ. ಹಂಚುತ್ತಿದ್ದಾರೆ. ಮತ್ತೆ ಕೆಲ ಅಭ್ಯರ್ಥಿಗಳು ವೋಟಿಗೆ 2000 ರೂ. ಕೊಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪ-ಪ್ರತ್ಯಾರೋಪ: ರಾಜ್ಯದ, ಅದರಲ್ಲೂ ಹಳೇ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಈಗಾಗಲೆ ಬಿಸಿ ಪಡೆದುಕೊಂಡಿದೆ. ತಮ್ಮ ಕಾಲಾವಧಿಯಲ್ಲಿ ಕೈಗೊಳ್ಳಲಿರುವ ಸುಧಾರಣೆಗಳ ಜತೆಗೆ ಅಭ್ಯರ್ಥಿಗಳು ಈ ಹಿಂದೆ ಅಧಿಕಾರ ನಡೆಸಿದವರ ವಿರುದ್ಧ ಆರೋಪ ಪ್ರತ್ಯಾರೋಪ, ಸುದ್ದಿಗೋಷ್ಠಿಯ ಸ್ವರೂಪದಲ್ಲಿ ರಾಜಕೀಯ ಚುನಾವಣೆಯನ್ನೇ ಹೋಲುವಂತಿದೆ.

ಭರ್ಜರಿ ಬಾಡೂಟ: ಮತದಾರರನ್ನು ಓಲೈಸಲು ಭರ್ಜರಿ ಬಾಡೂಟ ಹಾಕಿಸಲಾಗಿದೆ. ಮೂಲಗಳ ಪ್ರಕಾರ, ನ.15ರ ನಂತರ ಇಲ್ಲಿವರೆಗೆ ಕೆಲ ಸಿಂಡಿಕೇಟ್​ಗಳ ಸದಸ್ಯರು 1000ಕ್ಕೂ ಅಧಿಕ ಕಡೆಗಳಲ್ಲಿ ಬಾಡೂಟ ಹಾಗೂ ಮದ್ಯಪಾನ ವ್ಯವಸ್ಥೆ ಆಯೋಜಿಸಿದ್ದಾರೆ.

ರಾಜ್ಯ ಒಕ್ಕಲಿಗ ಸಂಘಕ್ಕೆ ಎಲ್ಲ ಮತದಾರರೂ ಅವರವರ ಕ್ಷೇತ್ರಕ್ಕೆ ಅನುಗುಣವಾಗಿ ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ. ಈ 35 ನಿರ್ದೇಶಕರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸಹ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತಾರೆ. ಮತದಾರರೇ ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆ ಇದೆ, ಆದರೆ ಈ ಬಾರಿ ಸಾಧ್ಯವಿಲ್ಲ.

| ಮರಿಮಲ್ಲಯ್ಯ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ

15 ಮತ ಚಲಾವಣೆ ಅವಕಾಶ: ಒಕ್ಕಲಿಗರ ಸಂಘದ ಚುನಾವಣೆ ವಿಭಿನ್ನವಾಗಿ ನಡೆಯುತ್ತದೆ. ಜಿಲ್ಲೆ ಹಾಗೂ ಕೆಲವು ಜಿಲ್ಲೆಗಳ ಗುಂಪುಗಳನ್ನು ಆಧರಿಸಿ ನಿರ್ದೇಶಕರನ್ನು ನಿಗದಿ ಮಾಡಲಾಗಿರುತ್ತದೆ. ಉದಾಹರಣೆಗೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಸೇರಿಸಿ ಒಟ್ಟು 15 ಜನರನ್ನು ಆಯ್ಕೆ ಮಾಡಬೇಕಿದ್ದು, ಈ ಭಾಗದ ಪ್ರತಿ ಮತದಾರರೂ ತಲಾ 15 ಮತ ಚಲಾಯಿಸಬಹುದು. ಹೀಗೆ ಜಿಲ್ಲೆಗೆ ಅನುಗುಣವಾಗಿ ನಿರ್ದೇಶಕರ ಸಂಖ್ಯೆ, ಮತಗಳನ್ನು ಚಲಾಯಿಸಲು ಅವಕಾಶ ಇರುತ್ತದೆ.

15ಕ್ಕೆ ಫಲಿತಾಂಶ: ಮುಖ್ಯವಾಗಿ 11 ಜಿಲ್ಲೆಗಳ ಹೊರರಾಜ್ಯದ ಸುಮಾರು 4.9 ಲಕ್ಷ ಆಜೀವ ಸದಸ್ಯರು ಡಿ.12ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಒಟ್ಟು 35 ಸದಸ್ಯರುಗಳನ್ನು ಮುಂದಿನ ಐದು ವರ್ಷ ಅವಧಿಗೆ ಆಯ್ಕೆ ಮಾಡುತ್ತಾರೆ. ಡಿ.15ರಂದು ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ.

ಬ್ರಾಹ್ಮಣ ಮಹಾಸಭಾದಲ್ಲಿ ಪ್ರಚಾರ ಭರಾಟೆ

44 ಸಾವಿರ ಸದಸ್ಯರಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಮೊದಲ ಹಂತದಲ್ಲಿ ಡಿ.12ರಂದು ಶಿವಮೊಗ್ಗ, ಹಾಸನ, ಮೈಸೂರು, ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಚುನಾವಣೆ ನಡೆಯಲಿದೆ. ಎರಡನೇ ಹಂತ ಡಿ.19ರಂದು ಬೆಂಗಳೂರಿನ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಪ್ರಮುಖವಾಗಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು, ರಾಜ್ಯಾದ್ಯಂತ ಪ್ರವಾಸದಲ್ಲಿದ್ದಾರೆ. ನಿವೃತ್ತ ನ್ಯಾಯಮೂರ್ತಿಗಳು, ಸಂಸದರು, ಶಾಸಕರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಈಗಾಗಲೆ ಇಬ್ಬರಲ್ಲಿ ಯಾರಿಗೆ ಬೆಂಬಲ ಎನ್ನುವುದನ್ನು ಬಹಿರಂಗವಾಗಿಯೇ ತಿಳಿಸಿವೆ. ಈ ನಡುವೆ, ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರಿ ಮತ್ತು ವಸಿಷ್ಠ ಬ್ಯಾಂಕ್​ಗಳ ವಿಚಾರ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬ್ಯಾಂಕ್​ಗಳ ವ್ಯವಹಾರದಲ್ಲಿ ಮಹಾಸಭಾದ ನಿಕಟಪೂರ್ವ ಅಧ್ಯಕ್ಷರ ಹೆಸರು ತಳುಕು ಹಾಕಿಕೊಂಡಿರುವುದರಿಂದ, ಅವರ ರಕ್ಷಣೆಗೆ ಒಂದು ಗುಂಪು ಕೆಲಸ ಮಾಡುತ್ತಿದೆ ಎಂಬ ಆರೋಪ ಮತ್ತೊಂದು ಗುಂಪಿನಿಂದ ಕೇಳಿಬರುತ್ತಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಮತದಾರರಿರುವ ಕಾರಣಕ್ಕೆ ಈ ವಿಷಯ ಪ್ರಭಾವ ಬೀರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net