

ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನವಾದ ಬುಧವಾರ ಗ್ರಾಮಸ್ಥರು ಓಕುಳಿ ಆಡಿ ಸಂಭ್ರಮಿಸಿದರು.
ಯುಗಾದಿ ಹಬ್ಬದ ಪ್ರಯುಕ್ತ ಮಂಗಳವಾರ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅರ್ಚಕರು ಹಾಗೂ ಗ್ರಾಮಸ್ಥರು ದೇಗುಲದಿಂದ ಸತ್ತಿಗೆ, ಸೂರಿಪಾನಿ, ಕೊಂಬು, ಕಹಳೆ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ನೀರಿನ ಆಸರೆಯಿರುವ ಹೊರವಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹೆಣ್ಣು ಮಕ್ಕಳಿಂದ ಸಂಪ್ರದಾಯದಂತೆ ಮೆರವಣಿಗೆ ಮೂಲಕ ದೇವರನ್ನು ಹೊತ್ತು ತಂದು ಗ್ರಾಮ ದೇವತೆ ಶ್ರೀ ಆದಿಶಕ್ತಿ ಕೋಣನ ಮಾರಮ್ಮನಿಗೆ ಅರ್ಪಿಸಿದರು.
ದೇವರನ್ನು ಹೊತ್ತು ತಂದ ಹೆಣ್ಣು ಮಕ್ಕಳು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಅರ್ಚಕರು ಬಿದಿರು ಬುಟ್ಟಿಯನ್ನು ಹೊತ್ತು ವಾದ್ಯದ ಮೇಳಕ್ಕೆ ಹೆಜ್ಜೆ ಹಾಕಿದರು. ದೇಗುಲದ ವತಿಯಿಂದ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಉತ್ಸವ ಮೂರ್ತಿ ಮೆರವಣಿಗೆ:
ಶ್ರೀ ಆದಿಶಕ್ತಿ ಕೋಣನ ಮಾರಮ್ಮನ ದೇಗುಲದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಪೂಜೆ ಪುನಸ್ಕಾರಗಳು ನಡೆದವು. ರಾತ್ರಿ 10 ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಕುರ್ಜಿನಲ್ಲಿ ಕೂರಿಸಿ ವಾದ್ಯಮೇಳದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಂಗದ ಮಾಳಕ್ಕೆ ಕರೆತರಲಾಯಿತು. ಪೂಜೆ ಹಾಗೂ ರಂಗದ ಕುಣಿತ ನಡೆದ ಬಳಿಕ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ಧನ, ಧಾನ್ಯವನ್ನು ಎಸೆಯುವುದರ ಮೂಲಕ ತಮ್ಮ ದೇವಿ ಕೃಪೆಗೆ ಪಾತ್ರರಾದರು. ಆನಾಪುರ, ಕಣ್ಣೂರು, ಚನ್ನಾಲಿಂಗನಹಳ್ಳಿ, ಜಿ.ಕೆ ಹೊಸೂರು, ಗುಂಡಾಪುರ, ಬೂದಬಾಳು, ಅಚಗಳ್ಳಿದೊಡ್ಡಿ, ಕಾಮಗೆರೆ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ಆಗಮಿಸಿದ್ದರು.
ಓಕುಳಿ ಎರಚಾಟ:
ಬುಧವಾರ ಬೆಳ್ಗಗೆ 5 ರಿಂದ 10 ಗಂಟೆಯವರೆಗೆ ದೇಗುಲದ ಮುಂಭಾಗ ಹಾಗೂ ಗ್ರಾಮದ ಬಡಾವಣೆಯಲ್ಲಿ ಯುವಕರು ಓಕುಳಿಯನ್ನು ಎರಚಾಡುತ್ತಾ ವಾದ್ಯದ ತಾಳಕ್ಕೆ ಕುಣಿದು ಸಂಭ್ರಮಿಸಿದರು. ಈ ಮೂಲಕ ಗ್ರಾಮದಲ್ಲಿ ಯುಗಾದಿ ಹಬ್ಬ ವಿಜೃಂಭಣೆಯಿಂದ ನಡೆಯಿತು.